ಏಪ್ರಿಲ್ 25 ರಿಂದ 14 ದಿನಗಳ ಭಾರತ ಗೌರವ್ ವಿಶೇಷ ರೈಲು ಸೇವೆ ಪ್ರವಾಸ, ವಿಶೇಷ ಪ್ಯಾಕೇಜ್: ವಿಘ್ನೇಶ್

2501 scaled

ಮಂಗಳೂರು: ಈಶಾನ್ಯ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಭಾರತೀಯ ರೈಲ್ವೆ, ಸೌತ್​​ ಸ್ಟಾರ್ ರೈಲ್ ಇಂಡಿಯಾ ಮತ್ತು ಟೂರ್ ಟೈಮ್ಸ್ ಆಶ್ರಯದಲ್ಲಿ ಭಾರತ ಗೌರವ್ ವಿಶೇಷ ಪ್ರವಾಸ ರೈಲು ಸೇವೆ ಆರಂಭಿಸಿದ್ದು, 14 ದಿನಗಳ ಈ ಪ್ರವಾಸ ಏಪ್ರಿಲ್ 25 ರಂದು ಉತ್ತರ ತಮಿಳುನಾಡಿನಿಂದ ಪ್ರಾರಂಭ ಆಗಲಿದೆ ಎಂದು ಭಾರತ ಗೌರವ್​ ರೈಲು ಯೋಜನೆಯ ನಿರ್ದೇಶಕ ವಿಘ್ನೇಶ್ ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಮಂಗಳೂರು ಸೇರಿದಂತೆ ರಾಜ್ಯದ ಪ್ರಯಾಣಿಕರಿಗೆ ಉಚಿತ ಸಂಪರ್ಕ ವ್ಯವಸ್ಥೆ ಒದಗಿಸಲಾಗಿದ್ದು, ಪಾಲಕ್ಕಾಡ್, ಒಟ್ಟಪಾಳಂ ಮತ್ತು ಶೋರ್ನೂರು ರೈಲು ನಿಲ್ದಾಣಗಳಿಂದ ರೈಲಿಗೆ ಹತ್ತುವ ಅವಕಾಶ ಕಲ್ಪಿಸಲಾಗಿದೆ. ಈ ಪ್ರವಾಸಕ್ಕೆ ಮೂರು ಪ್ಯಾಕೇಜ್‌ಗಳನ್ನು ರೂಪಿಸಲಾಗಿದ್ದು, ಪ್ರವಾಸಿಗರು ತಮ್ಮ ಸೌಲಭ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಮೊದಲನೇ ಪ್ಯಾಕೇಜ್ ಡಾರ್ಜಿಲಿಂಗ್ ಮತ್ತು ಗ್ಯಾಂಗ್ಟಾಕ್ ಪ್ರವಾಸವನ್ನು ಒಳಗೊಂಡಿದ್ದು, ಸ್ಲೀಪರ್ ಕೋಚ್ ದರ 45,950 ರೂಪಾಯಿ, 3 ಎಸಿ 53,300 ರೂ, 2 ಎಸಿ 66,500 ರೂ ಹಾಗೂ ಫಸ್ಟ್ ಎಸಿ 72,100 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

2 ನೇ ಪ್ಯಾಕೇಜ್ ಈಶಾನ್ಯ ಸ್ಟ್ಯಾಂಡರ್ಡ್ ಪ್ಯಾಕೇಜ್ ಆಗಿದ್ದು, ಇದರಲ್ಲಿ ಅಸ್ಸಾಂ, ಶಿಲ್ಲಾಂಗ್, ಮೇಘಾಲಯ ಸೇರಿದಂತೆ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು ಅವಕಾಶವಿದೆ. ಈ ಪ್ಯಾಕೇಜ್‌ನಲ್ಲಿ ಸ್ಲೀಪರ್ ದರ 59,350 ರೂ, ಥರ್ಡ್ ಎಸಿ 64,350 ರೂ, ಸೆಕೆಂಡ್ ಎಸಿ 74,450 ರೂ ಹಾಗೂ ಫಸ್ಟ್ ಎಸಿ 79,950 ರೂ ಎಂದು ನಿಗದಿಪಡಿಸಲಾಗಿದೆ.
3 ನೇ ಪ್ಯಾಕೇಜ್ ಭೂತಾನ್ ವಿಶೇಷ ಪ್ಯಾಕೇಜ್ ಆಗಿದ್ದು, ಅಂತರ ರಾಷ್ಟ್ರೀಯ ತಾಣ ಭೂತಾನ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಈ ಪ್ಯಾಕೇಜ್‌ನಲ್ಲಿ ಸ್ಲೀಪರ್ ದರ 76,950 ರೂ, ಥರ್ಡ್ ಎಸಿ 83,500 ರೂ, ಸೆಕೆಂಡ್ ಎಸಿ 94,950 ರೂ ಹಾಗೂ ಫಸ್ಟ್ ಎಸಿ 97,900 ರೂಪಾಯಿ ನಿಗದಿಪಡಿಸಲಾಗಿದೆ ಎಂದರು.

ಈ ವಿಶೇಷ ರೈಲಿನಲ್ಲಿ ಒಟ್ಟು 650 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಫಸ್ಟ್ ಎಸಿ, ಮೂರು ಸೆಕೆಂಡ್ ಎಸಿ, 5 ಥರ್ಡ್ ಎಸಿ ಹಾಗೂ 2 ಸ್ಲೀಪರ್ ಕೋಚ್‌ಗಳನ್ನು ಹೊಂದಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಕೋಚ್‌ಗೆ ಕೋಚ್ ಮ್ಯಾನೇಜರ್ ಮತ್ತು ಟೂರ್ ಕ್ಯಾಪ್ಟನ್ ನೇಮಕ ಮಾಡಲಾಗಿದೆ. ಪ್ರವಾಸದ ಅವಧಿಯಲ್ಲಿ ದಕ್ಷಿಣ ಭಾರತೀಯ ಮನೆ ಶೈಲಿಯ ಆಹಾರವನ್ನು ರೈಲಿನಲ್ಲೇ ತಯಾರಿಸಿ ನೀಡಲಾಗುತ್ತದೆ. ಹೋಟೆಲ್ ವಸತಿ, ಸ್ಥಳೀಯ ಸಾರಿಗೆ, ಪ್ರವಾಸ ಮಾರ್ಗದರ್ಶಕರು, ವೈದ್ಯಕೀಯ ನೆರವು ಮತ್ತು ಸುರಕ್ಷತಾ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಜತೆಗೆ ರೈಲ ಅನ್ನು ಮೂರು ಗಂಟೆಗೆ ಒಮ್ಮೆ ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು ಹಾಗೂ ಕುಟುಂಬದೊಂದಿಗೆ ಪ್ರಯಾಣಿಸಲು ಈ ಪ್ರವಾಸ ವಿಶೇಷವಾಗಿ ಅನುಕೂಲಕರ ಎಂದು ತಿಳಿಸಿದರು.

ಈಶಾನ್ಯ ಭಾರತದ ಪ್ರಕೃತಿ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಸಮೀಪದಿಂದ ಅನುಭವಿಸಲು ಈ ವಿಶೇಷ ಪ್ರವಾಸ ಉತ್ತಮ ಅವಕಾಶವಾಗಿದ್ದು, ಪ್ರಯಾಣಿಕರಿಗೆ ಸಂಪೂರ್ಣ ಸಹಾಯ ಮತ್ತು ಸುರಕ್ಷತೆ ಒದಗಿಸಲಾಗುತ್ತದೆ. ಈ ಪ್ರವಾಸಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಆಸಕ್ತರು www.tourtimes.in ವೆಬ್‌ಸೈಟ್ ಮೂಲಕ ಅಥವಾ ಸಹಾಯವಾಣಿ ಸಂಖ್ಯೆ 7305 8585 8585ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಇದು irctc ಮೂಲಕ ಬುಕಿಂಗ್ ಸಾಧ್ಯವಿಲ್ಲ ಎಂದು ತಿಳಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma