ಮಂಗಳೂರು: ಭಾರತೀಯ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ಭಾರತ ಗೌರವ ವಿಶೇಷ ಪ್ರವಾಸಿ ರೈಲ್ವೆ ಹಾಗೂ ವಿಮಾನ ಪ್ರವಾಸದ ವಿಶಿಷ್ಟ ಪ್ಯಾಕೇಜ್ ಘೋಷಣೆ ಮಾಡಿದ್ದು, ಬೇಸಿಗೆ ಪ್ರವಾಸಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಆರ್‌ಸಿಟಿಸಿ ದಿವ್ಯ ದ್ವಾರಕಾ-ಸೋಮನಾಥ ಯಾತ್ರೆ ಭಾರತ ಗೌರವ ವಿಶೇಷ ಪ್ರವಾಸಿ ರೈಲು ಅನ್ನು ಪ್ರಾರಂಭಿಸುತ್ತಿದೆ. ಈ ರೈಲು ಮೇ 10 ರಂದು ಕರ್ನಾಟಕದ ಮಂಗಳೂರಿನ ಮೂಲಕ ಹೊರಡಲಿದೆ ಮತ್ತು ಮೇ 19 ರಂದು ವಾಪಸ್ ಆಗಲಿದೆ. ಈ ವಿಶಿಷ್ಟ 10 ದಿನಗಳ ಕಾರ್ಯಕ್ರಮ ತೀರ್ಥಯಾತ್ರೆಯನ್ನು ವಿನೋದ ಪ್ರವಾಸದ ಜತೆಗೆ ಖುಷಿಯಿಂದ ಕಳೆಯಲು ಎಲ್ಲ ಸೌಲಭ್ಯ ಇದ್ದು, ಗುಜರಾತ್ ಪ್ರಮುಖ ಆಧ್ಯಾತ್ಮಿಕ ಸ್ಥಳಗಳು ಮತ್ತು ಗೋವಾದ ಸುಂದರ ಪ್ರವಾಸಿ ಸ್ಥಳಗಳನ್ನು ಒಳಗೊಂಡಿದೆ ಎಂದರು.

ದ್ವಾರಕಾದಲ್ಲಿ ನಾಗೇಶ್ವರ ಜ್ಯೋತಿರ್ಲಿಂಗ, ಬೆಟ್ ದ್ವಾರಕಾ, ದ್ವಾರಕಾಧೀಶ ದೇವಾಲಯ ಮತ್ತು ರುಕ್ಮಿಣಿ ದೇವಿ ದೇವಾಲಯಗಳಿಗೆ ಭೇಟಿ ನೀಡುವುದು, ಸೋಮನಾಥ ಜ್ಯೋತಿರ್ಲಿಂಗ ಮತ್ತು ಭಲ್ಕಾ ತೀರ್ಥ; ನಿಷ್ಕಳಂಕ ಮಹಾದೇವ ದೇವಾಲಯ ಮತ್ತು ಗಾಂಧಿ ಸ್ಮೃತಿ. ಗೋವಾದಲ್ಲಿ ಪ್ರಯಾಣಿಕರು ಐತಿಹಾಸಿಕ ಅಗುವಾಡಾ ಕೋಟೆ, ಬೊಮ್ ಜೀಸಸ್ ಬೆಸಿಲಿಕಾ ಮತ್ತು ಜನಪ್ರಿಯ ಕಲಾಂಗುಟೆ ಮತ್ತು ಕೋಲ್ವಾ ಬೀಚ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ ಎಂದರು.
ಪ್ರತಿ ವ್ಯಕ್ತಿಗೆ ರೈಲು ಪ್ರವಾಸದ ಪ್ಯಾಕೇಜ್ ದರ 28,760 ರೂಪಾಯಿ ಆಗಿದ್ದು, ಪ್ಯಾಕೇಜ್‌ನಲ್ಲಿ 3ನೇ ಎಸಿ ರೈಲು ಪ್ರಯಾಣ, ಆರಾಮದಾಯಕ ಎಸಿ ಹೋಟೆಲ್ ವಸತಿ, ಏಸಿ ರಸ್ತೆ ಸಾರಿಗೆ, ದಿನಕ್ಕೆ ಮೂರು ಸಸ್ಯಾಹಾರಿ ಊಟ, ವೃತ್ತಿಪರ ಟೂರ್ ಎಸ್ಕಾರ್ಟ್‌ಗಳು, ಸುರಕ್ಷತಾ ಸಿಬ್ಬಂದಿ, ಪ್ರಯಾಣ ವಿಮೆ ಎಲ್ಲವೂ ಸೇರಿದೆ. ಪ್ರಯಾಣಿಕರು ಮಂಗಳೂರು ಮತ್ತು ಉಡುಪಿ ನಿಲ್ದಾಣಗಳಿಂದ ರೈಲಿಗೆ ಏರಬಹುದು. ಬುಕ್ಕಿಂಗ್‌ಗಾಗಿ ಐಆರ್‌ಸಿಟಿಸಿ ಅಧಿಕೃತ ಪೋರ್ಟಲ್‌ನಲ್ಲಿ ಮುಂಚಿತವಾಗಿ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು ಎಂದರು.
ಮಂಗಳೂರಿನಿಂದ ವಿಮಾನ ಪ್ರವಾಸ ಪ್ಯಾಕೇಜ್ ಸೌಲಭ್ಯವು ಇದ್ದು, ಐಆರ್‌ಸಿಟಿಸಿ ಶಿರಡಿ, ಶನಿ ಶಿಂಗಣಾಪುರ ದೇವಾಲಯ, ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯ, ತ್ರ್ಯಂಬಕೇಶ್ವರ ಶಿವ ದೇವಾಲಯ, ಪಂಚವಟಿ ಮತ್ತು ಪ್ರಸಿದ್ಧ ಎಲ್ಲೋರಾ ಗುಹೆಗಳನ್ನು ಒಳಗೊಂಡ ತೀರ್ಥಯಾತ್ರಾ ಪ್ಯಾಕೇಜ್ ಅನ್ನು ನೀಡುತ್ತಿದೆ. ಪ್ರಯಾಣವು ಏ.22 ರಿಂದ 26 ರವರಿಗೆ ಇದ್ದು, 28,050 ರೂಪಾಯಿ ದರವನ್ನು ಪ್ರತಿ ವ್ಯಕ್ತಿ ನಿಗದಿ ಮಾಡಲಾಗಿದೆ. ವಿಮಾನ ಟಿಕೆಟ್, ಊಟ ಸೇರಿದ ವಸತಿ, ಸ್ಥಳೀಯ ಸಾರಿಗೆ, ಟೂರ್ ಕೋ-ಆರ್ಡಿನೇಟರ್ ಸೇವೆ ಮತ್ತು ಪ್ರಯಾಣ ವಿಮೆ ಎಲ್ಲವೂ ಸೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ನೌಕರರಿಗೆ ಲೀವ್ ಟ್ರಾವೆಲ್ ಕನ್‌ಸೆಷನ್ ಸೌಲಭ್ಯ ಲಭ್ಯವಿದೆ. ವಿವರಗಳು ಮತ್ತು ಬುಕ್ಕಿಂಗ್‌ಗಾಗಿ ವೆಬ್‌ಸೈಟ್: www.irctctourism.com ಅಥವಾ ಐಆರ್‌ಸಿಟಿಸಿ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ – ಮೊಬೈಲ್ 8287932043 ಹಾಗೂ ದೂರವಾಣಿ 0824-2001936 ಸಂಖ್ಯೆಯನ್ನ ಸಂಪರ್ಕ ಮಾಡುವಂತೆ ತಿಳಿಸಿದರು.
ಹಿರಿಯ ಕಾರ್ಯನಿರ್ವಾಹಕ ವಿನೋದ ನಾಯರ್ ಅವರು ಮಾತನಾಡಿ, ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಇರುವ ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮ ಆಗಿದ್ದುಮ ರೈಲು ನಿಲ್ದಾಣಗಳಲ್ಲಿ, ರೈಲುಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕ್ಯಾಟರಿಂಗ್ ಮತ್ತು ಆತಿಥ್ಯ ಸೇವೆಗಳನ್ನು ಅಪ್‌ಗ್ರೇಡ್, ವೃತ್ತಿಪರಗೊಳಿಸುವುದು ಮತ್ತು ನಿರ್ವಹಿಸುವುದು ಹಾಗೂ ದೇಶೀಯ ಮತ್ತು ಅಂತರ ರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಐಆರ್‌ಸಿಟಿಸಿ ಸ್ಥಾಪಿಸಲಾಗಿದೆ. ಕಡಿಮೆ ದರದಲ್ಲಿ ಬೇಸಿಗೆ ಪ್ರವಾಸದ ವ್ಯವಸ್ಥೆಯನ್ನು ಪ್ರಯಾಣಿಕರ ಅನುಕೂಲಕ್ಕೆ ಐಆರ್ಸಿಟಿಸಿ ಮಾಡಿದೆ ಎಂದರು.





