ರಾಯಚೂರು: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಯಚೂರು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಉಷ್ಣಾಂಶ ಮತ್ತು ಬಿಸಿಗಾಳಿ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ ಕಾಂದೂ ಅವರು ಸೂಚನೆ ನೀಡಿದ್ದಾರೆ.
ಬಿಸಿಲಿನ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ, ಸಾಕಷ್ಟು ನೀರು ಕುಡಿಬೇಕು ಹಾಗೂ ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗಡೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಬಿಸಿಲಿನಲ್ಲಿ ಹೊರಗೆ ಹೋಗುವವರು ಟೋಪಿ, ಛತ್ರಿ, ಸನ್ ಗ್ಲಾಸ್ ಬಳಸಬೇಕು. ಸಾಧ್ಯವಾದರೆ ಒದ್ದೆಯಾದ ಬಟ್ಟೆಯನ್ನು ತಲೆ ಮತ್ತು ಮುಖದ ಮೇಲೆ ಬಳಸಬೇಕು. ಲಸ್ಸಿ, ನಿಂಬೆ ನೀರು, ಮಜ್ಜಿಗೆ ಸೇರಿದಂತೆ ದ್ರವ ಆಹಾರಗಳನ್ನು ಹೆಚ್ಚಾಗಿ ಸೇವಿಸುವಂತೆ ಸಲಹೆ ನೀಡಿದ್ದಾರೆ.
ಮಕ್ಕಳು, ಹಿರಿಯರು, ಗರ್ಭಿಣಿಯರು ಹಾಗೂ ಹೃದಯ ಮತ್ತು ರಕ್ತದೊತ್ತಡದ ರೋಗಿಗಳು ವಿಶೇಷ ಜಾಗರೂಕತೆ ವಹಿಸಬೇಕು. ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಬಿಡಬಾರದು, ಕಪ್ಪು ಅಥವಾ ಬಿಗಿಯಾದ ಬಟ್ಟೆಗಳನ್ನು ತಪ್ಪಿಸಬೇಕು ಹಾಗೂ ದೇಹವನ್ನು ನಿರ್ಜಲೀಕರಣಗೊಳಿಸುವ ಪಾನೀಯಗಳನ್ನು ತಪ್ಪಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





