ಮಂಗಳೂರು: ಮೂರು ತಿಂಗಳುಗಳಿಂದ ವರ್ಗಾವಣೆಯ ಆದೇಶ ಪತ್ರ ಬಂದರೂ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ ಎಂದು ವರ್ಗಾವಣೆ ಆದೇಶ ಪಡೆದಿರುವ ಪೊಲೀಸರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಸಭೆಗೆ ಬಂದಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿದ ಪೊಲೀಸ್ ಕುಟುಂಬದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಅಹವಾಲು ಸಲ್ಲಿಸಿದರು.
ವರ್ಗಾವಣೆ ಆದೇಶ ಬಂದು ಮೂರು ತಿಂಗಳು ಕಳೆದಿದೆ. ಆದರೆ, ಇನ್ನೂ ನಿಯುಕ್ತಿ ಮಾಡಿಲ್ಲ. ಆದಷ್ಟು ಬೇಗ ವರ್ಗಾವಣೆ ಆದೇಶ ಜಾರಿಗೊಳಿಸಿ ಎಂದು ವರ್ಗಾವಣೆಗೊಂಡ ಪೊಲೀಸ್ ಕುಟುಂಬಸ್ಥರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರನ್ನು ಒತ್ತಾಯಿಸಿದರು.
10 ವರ್ಷಗಳಿಂದ ಸೇವೆ ಪೂರ್ಣಗೊಂಡ ಪೊಲೀಸ್ ಸಿಬ್ಬಂದಿಗೆ ವರ್ಗಾವಣೆ ಆದೇಶ ಬಂದಿದೆ. ಕೋಮು ಗಲಭೆ, ಸಿಬ್ಬಂದಿ ಕೊರತೆ ನೆಪ ಇಟ್ಟುಕೊಂಡು ಪೊಲೀಸ್ ಕಮಿಷನರ್ ವರ್ಗಾವಣೆ ಮಾಡುತ್ತಿಲ್ಲ ಎಂದು ಪೊಲೀಸ್ ಕುಟುಂಬಸ್ಥರು ತಮ್ಮ ನೋವಿನ ಅಹವಾಲು ಮಂಡಿಸಿದರು.
ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳಿವೆ. ಊರಿನಲ್ಲಿ ಹಿರಿಯರಿದ್ದಾರೆ, ಅವರನ್ನು ನೋಡಿಕೊಳ್ಳಬೇಕಿದೆ. ಮಕ್ಕಳ ಶಾಲಾ, ಕಾಲೇಜು ಶಿಕ್ಷಣಕ್ಕೆ ಪ್ರವೇಶ ಕೂಡ ಕಷ್ಟವಾಗಿದೆ. ಹಾಗಾಗಿ ನಮಗೆ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸುವ ಅನಿವಾರ್ಯತೆ ಇದೆ ಎಂದು ಪೊಲೀಸ್ ಕುಟುಂಬದ ಸದಸ್ಯರು ಎಚ್ಚರಿಕೆ ನೀಡಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಸಲೀಂ ಅವರು ಈ ವೇಳೆ ಪ್ರತಿಕ್ರಿಯೆ ನೀಡಿ, ಉತ್ತರ ಕರ್ನಾಟಕ ಭಾಗದ ಅನೇಕ ಪೊಲೀಸ್ ಸಿಬ್ಬಂದಿ, ಹಾಗೂ ಕುಟುಂಬದ ಸದಸ್ಯರು ವರ್ಗಾವಣೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಹಂತ ಹಂತವಾಗಿ ವರ್ಗಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಗೆ 801 ಪೊಲೀಸ್ ಸಿಬ್ಬಂದಿಯ ಮಂಜೂರಾತಿ ಆಗಿದೆ. ಆದರೆ, ಇದೀಗ 685 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 116 ಕಾನ್ಸ್ಟೆಬಲ್ಗಳ ಹುದ್ದೆ ಖಾಲಿ ಇವೆ. ವರ್ಗಾವಣೆಗೊಂಡ 63 ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ಗಳನ್ನು ಬಿಡುಗಡೆ ಮಾಡಿದರೆ, ಖಾಲಿ ಹುದ್ದೆಗಳು ಶೇ 22.1 ಆಗುತ್ತವೆ. ಇದು 15 ಪ್ರತಿಶತ ದಾಟುತ್ತಿರುವುದರಿಂದ ಸರಕಾರದ ನಿಯಮಾನುಸಾರ ಅವರನ್ನು ಬಿಡುಗಡೆ ಮಾಡುವುದಕ್ಕೆ ಸಾಧ್ಯ ಆಗುತ್ತಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿ ಕುಟುಂಬಸ್ಥರ ಆರೋಪಕ್ಕೆ ಸಂಬಂಧಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ಜನರು ರಸ್ತೆ, ಟ್ರಾಫಿಕ್, ಬಂದೋಬಸ್ತ್, ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತಡೆಯಲು, ಅಪರಾಧ ಪತ್ತೆ ಮಾಡಲು, ತನಿಖೆ ಮಾಡಲು, ಬೀಟ್ ಮೀಟಿಂಗ್ ಮಾಡಲು ಪೊಲೀಸರನ್ನು ನಿರೀಕ್ಷಿಸುತ್ತಾರೆ. ಜನತೆಯ ಸಹಕಾರದಿಂದಾಗಿ ನಗರ ಶಾಂತಿಯುತವಾಗಿದೆ. ಅಂತರ್ ಜಿಲ್ಲಾ ವರ್ಗಾವಣೆ ಪಡೆಯಲು ಬಡ್ತಿಯನ್ನೂ ಕೈಬಿಟ್ಟಿದ್ದಾರೆ. ಕಾನ್ಸ್ಟೆಬಲ್ ಮತ್ತವರ ಕುಟುಂಬಸ್ಥರ ನೋವು ಸಹಜ ಆಗಿದೆ. ನಾವು ಅವರ ಯೋಗಕ್ಷೇಮ ನೋಡುವುದರ ಜತೆಗೆ ನಗರದ ಕಾನೂನು ಸುವ್ಯವಸ್ಥೆಯನ್ನು ಗಮನಿಸಬೇಕಿದೆ. ನನ್ನ ಸೇವಾವಧಿಯಲ್ಲಿ ಯಾವುದೇ ಒಬ್ಬ ಕಾನ್ಸ್ಟೇಬಲ್ನ ಇಎಲ್ ಅರ್ಜಿ ತಿರಸ್ಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಂತ ಹಂತವಾಗಿ ವರ್ಗಾವಣೆಗೆ ಕ್ರಮ: ಡಾ. ಸಲೀಂ
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿವರ್ಷದಿಂದ ಕಾನೂನು ಸುವ್ಯವಸ್ಥೆ ತುಂಬಾ ಉತ್ತಮ ಆಗಿದೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಸೂಚಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿ, ವರ್ಷದಿಂದ ಇಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ ಆಗಿದೆ. ಇದನ್ನೇ ಮುಂದುವರೆಸಿಕೊಂಡು ಹೋಗುವಂತೆ ನಿರ್ದೇಶನ ನೀಡಿದ್ದೇನೆ. ಉತ್ತರ ಕರ್ನಾಟಕ ಭಾಗದ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬದವರು ವರ್ಗಾವಣೆ ವಿಚಾರದಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು.
ಹಂತ ಹಂತವಾಗಿ ವರ್ಗಾವಣೆಗೆ ಕ್ರಮ ವಹಿಸಲಾಗುವುದು ಎಂದ ಡಾ.ಎಂ.ಎ. ಸಲೀಂ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಬೆಂಗಳೂರಿನ ಜಾರಿ ನಿದೇರ್ಶನಾಲಯದ ಎಸ್ಪಿಎಸ್. ಎಸ್. ಕಾಶಿ ನೀಡಿದ ದೂರಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.





