ಏಪ್ರಿಲ್ 4 ರಂದು ಹೊನಲು ಬೆಳಕಿನ ಮೂಳೂರು-ಅಡ್ಡೂರು ಜೋಡುಕರೆ ಕಂಬಳ: ಇನಾಯಿತ್ ಅಲಿ

Spread the love

ಮಂಗಳೂರು: ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಸಂಕೇತ ಆಗಿರುವ ಕಂಬಳ ಕ್ರೀಡೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಗುರುಪುರದ ಮಾಣಿಬೆಟ್ಟುವಿನಲ್ಲಿ ಏಪ್ರಿಲ್ 4 ರಂದು 3ನೇ ವರ್ಷದ ಹೊನಲು ಬೆಳಕಿನ ಮೂಳೂರು-ಅಡ್ಡೂರು ಜೋಡುಕರೆ ಕಂಬಳವನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತದೆ. ಮುಂದಿನ ಬಾರಿ ದಸರಾದಲ್ಲಿಯೂ ಕಂಬಳ ನಡೆಸುವ ಭರವಸೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಸಿಕ್ಕಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಂಬಳ ಕೇವಲ ಕ್ರೀಡೆಯಲ್ಲ, ಇದು ನಮ್ಮ ಮಣ್ಣಿನ ಸಂಸ್ಕೃತಿ. ಜಾತಿ, ಮತ, ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ ಆಚರಿಸುವ ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಮುಖ್ಯ ಉದ್ದೇಶ. ಕಳೆದ ಬಾರಿ ಕಂಬಳ ವೀಕ್ಷಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿಯ ಈ ವೀರ ಕ್ರೀಡೆಗೆ ಮನಸೋತು, ಮೈಸೂರು ದಸರಾದಲ್ಲೂ ಕಂಬಳ ಆರಂಭಿಸುವ ಘೋಷಣೆ ಮಾಡಿದ್ದರು. ತಾಂತ್ರಿಕ ಕಾರಣಗಳಿಂದ ಕಳೆದ ಬಾರಿ ಇದು ಸಾಧ್ಯವಾಗಲಿಲ್ಲ. ಮುಂದಿನ ದಸರಾ ಉತ್ಸವದಲ್ಲಿ ಕಂಬಳಕ್ಕೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದರು.

ಏ. 4 ರಂದು ಬೆಳಿಗ್ಗೆ 8. 30 ಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಕಂಬಳ ಉದ್ಘಾಟಿಸಲಿದ್ದಾರೆ. ಸಂಜೆ 6. 30 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಂಸದ ಹಾಗೂ ಬಮುಲ್ ಬೆಂಗಳೂರು ಅಧ್ಯಕ್ಷ ಡಿ.ಕೆ. ಸುರೇಶ್ ಉದ್ಘಾಟಿಸಲಿದ್ದಾರೆ. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿಯ ಕಂಬಳದಲ್ಲಿ ಭಾಗವಹಿಸುವ ಪ್ರತಿಯೊಂದು ಕೋಣಗಳ ಮಾಲೀಕರಿಗೆ ಬೆಳ್ಳಿಯ ನಾಣ್ಯ ಹಾಗೂ ಹುರುಳಿ ವಿತರಿಸಲಾಗುವುದು. ಅಲ್ಲದೆ, ಕನೆಹಲಗೆ ವಿಭಾಗದಲ್ಲಿ ನಿಗದಿತ ಎತ್ತರಕ್ಕೆ ನೀರು ಹಾಯಿಸಿದ ಎಲ್ಲ ಕೋಣಗಳಿಗೆ ತಲಾ 1 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಇದರೊಂದಿಗೆ ಯಕ್ಷಗಾನ ಸಾಧಕರಿಗೆ ಸನ್ಮಾನ, ಫುಡ್ ಫೆಸ್ಟಿವಲ್, ಕೇರಳದ ಪ್ರಸಿದ್ಧ ಚೆಂಡೆವಾದನ ಮತ್ತು ಆಕರ್ಷಕ ಸುಡುಮದ್ದು ಪ್ರದರ್ಶನ ಕಂಬಳದ ಮೆರುಗು ಹೆಚ್ಚಿಸಲಿವೆ ಎಂದರು.

ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ಗುಣಪಾಲ ಕಡಂಬ ಅವರು ಮಾತನಾಡಿ, ಒಂದು ಕಾಲದಲ್ಲಿ ಕಂಬಳ ಎನ್ನುವುದು ಕೇವಲ ಕ್ರೀಡೆ ಆಗಿರಲಿಲ್ಲ, ಅದು ಇಡೀ ತಿಂಗಳು ನಡೆವ ದೊಡ್ಡ ಜಾತ್ರೆ ಆಗಿರುತ್ತಿತ್ತು. ರೈತರಿಗೆ ಬೇಕಾದ ವಸ್ತುಗಳ ಕೊಡು-ಕೊಳ್ಳುವಿಕೆ ಮತ್ತು ಪರಸ್ಪರ ಗೌರವದ ವಿನಿಮಯಕ್ಕೆ ಪವಿತ್ರ ವೇದಿಕೆ ಆಗಿತ್ತು. ಕಂಬಳದ ಅಂಗಳದಲ್ಲಿ ಕೋಣಗಳನ್ನು ಓಡಿಸಲು ಬಿಟ್ಟ ಮೇಲೆ, ಓಡುವವರು ಮತ್ತು ಬಿಡುವವರನ್ನು ಹೊರತುಪಡಿಸಿ ಬೇರೆ ಯಾರೂ ಕೆರೆಯಲ್ಲಿ ಒಂದು ಹೆಜ್ಜೆ ಮುಂದಿಡಬಾರದು. ಕಂಬಳದ ಘನತೆ ಉಳಿಸಲು ಸ್ವಯಂ ಶಿಸ್ತು ಅತ್ಯಂತ ಅಗತ್ಯ. ನಮ್ಮ ಈ ಮೂಳೂರು-ಅಡ್ಡೂರು ಕಂಬಳದಲ್ಲೂ ಅಂತಹ ಶಿಸ್ತನ್ನು ನಾವು ಕಾಪಾಡಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಈ ಕ್ರೀಡೆಯನ್ನು ಯಶಸ್ವಿಗೊಳಿಸಬೇಕು ಎಂದರು.

ರಾಜ್ಯ ಕಂಬಳ ಅಸೋಸಿಯೇಷನ್ ಪದಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಅವರು ಮಾತನಾಡಿ, ಈ ಬಾರಿ ಕಂಬಳದಲ್ಲಿ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಓಟದ ನಿಖರತೆಗಾಗಿ ಹೊಸ ತಂಡದ ಮೂಲಕ ಸೆನ್ಸಾರ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ ಎಂದರು.

ಕಂಬಳದ ಆಮಂತ್ರಣ ಪತ್ರಿಕೆಯನ್ನು ಇನಾಯತ್‌ ಅಲಿ ಸೇರಿದಂತೆ ಹಲವರು ಬಿಡುಗಡೆ ಮಾಡಿದರು. ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್‌, ಮಾಜಿ ಉಪಮೇಯರ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಸದಸ್ಯ, ಸಮಿತಿ ಉಪಾಧ್ಯಕ್ಷ ಆರ್‌ ಕೆ ಪೃಥ್ವಿರಾಜ್, ಪ್ರಧಾನ ಕಾರ್ಯದರ್ಶಿ ಯಶವಂತ್‌ ಕುಮಾರ್‌ ಶೆಟ್ಟಿ ಬೆಳ್ಳೂರುಗುತ್ತು, ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ಮಾಣಿಬೆಟ್ಟುಗುತ್ತು, ವ್ಯವಸ್ಥಾಪಕ ವಿನಯ ಕುಮಾರ್‌ ಶೆಟ್ಟಿ ಮಾಣಿಬೆಟ್ಟುಗುತ್ತು ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *