ಡಾ. ಜಗಜೀವನ ರಾಮ್, ಡಾ. ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ, ಶಿಷ್ಟಾಚಾರ ಪಾಲನೆಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಸೂಚನೆ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏ. 5 ರಂದು ಡಾ.ಬಾಬು ಜಗಜೀವನ ರಾಮ್ ಮತ್ತು ಏಪ್ರಿಲ್ 14 ರಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಸೂಚಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಏ. 14 ರಂದು ನಡೆವ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ ರಾಮ್ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಲಾರ್ಪಣೆ, ಪುಷ್ಪ ನಮನ ಮತ್ತು ಪೂಜೆ ಸಲ್ಲಿಸಿ, ಭಾವಚಿತ್ರಗಳನ್ನು ತರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆ ಮೆರವಣಿಗೆ ಆಯೋಜಿಸುವಂತೆ ತಿಳಿಸಿದರು.

ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕುಡಿವ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾತಂಡಗಳನ್ನು ಪ್ರಾಯೋಜಿಸುವಂತೆ ಸೂಚಿಸಿದರು.

ಡಾ.ಬಾಬು ಜಗಜೀವನ ರಾಮ್ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ವಿಷಯ ತಜ್ಞರಿಂದ ವಿಶೇಷ ಉಪನ್ಯಾಸ ಆಯೋಜಿಸಬೇಕು, ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಪ.ಜಾತಿ ಮತ್ತು ಪ.ಪಂಗಡದ ಪ್ರತಿಭಾನ್ವಿತರಿಗೆ, ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.

ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು, ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಿರಬೇಕು, ಪೊಲೀಸ್ ಇಲಾಖೆ ವತಿಯಿಂದ ಮೆರವಣಿಗೆಗೆ ಸೂಕ್ತ ಪೊಲೀಸ್ ಭದ್ರತೆ ಮತ್ತು ಪೊಲೀಸ್ ಬ್ಯಾಂಡ್ ಒದಗಿಸಬೇಕು ಎಂದರು.

ಈಚೆಗೆ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆ ಆಗಿರುವ ಜಿಲ್ಲೆಯ ಎಸ್ಸಿ, ಎಸ್ಟಿ ಸಮುದಾಯದ ಪ್ರತಿಭಾನ್ವಿತರನ್ನು ಸನ್ಮಾನಿಸುವಂತೆ ಮತ್ತು ಕಾರವಾರದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮುದಾಯದ ಮುಖಂಡರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿ.ಪಂ. ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಉಮೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಪ.ಜಾತಿ ಪಂಗಡದ ಸಮುದಾಯಗಳ ಮುಖಂಡರು ಹಾಜರಿದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *