ಕುಡ್ಲದಲ್ಲಿ ರಾಷ್ಟ್ರ ಮಟ್ಟದ ಕ್ಲಾಸಿಕ್ ಪವರ್‌ ಲಿಫ್ಟಿಂಗ್ ಚಾಂಪಿಯನ್ ಷಿಪ್,  300 ಪವರ್ ಲಿಫ್ಟರ್ ಗಳ ಸೆಣಸಾಟಕ್ಕೆ  ಸಕಲ ಸಿದ್ದತೆ: ಸತೀಶ್ ಕುದ್ರೋಳಿ

2103

ಮಂಗಳೂರು: ಕರಾವಳಿಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಮಂಗಳೂರು ಸಜ್ಜಾಗಿದೆ. ಕರ್ನಾಟಕ ಪವರ್‌ ಲಿಫ್ಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಮತ್ತು ಕಶಾರ್ಪ್ ಫಿಟ್ನೆಸ್ ವತಿಯಿಂದ ರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸಿಕ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ ಷಿಪ್ ಇದೇ 24 ರಿಂದ 28 ರವರೆಗೆ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಅಂತರ ರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಕುಮಾರ್ ಕುದ್ರೋಳಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐದು ದಿನಗಳ ಕಾಲ ನಡೆವ ಈ ಬೃಹತ್ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 300 ಕ್ಕೂ ಹೆಚ್ಚು ನುರಿತ ಪುರುಷ ಮತ್ತು ಮಹಿಳಾ ಪವರ್‌ ಲಿಫ್ಟರ್‌ಗಳು ಪಾಲ್ಗೊಳ್ಳಲಿದ್ದಾರೆ. ಸ್ಕ್ವಾಟ್, ಬೆಂಚ್ ಪ್ರೆಸ್ ಮತ್ತು ಡೆಡ್‌ ಲಿಫ್ಟ್ ವಿಭಾಗಗಳಲ್ಲಿ ಕ್ರೀಡಾಪಟುಗಳು ತಮ್ಮ ಶಕ್ತಿ ಹಾಗೂ ತಾಂತ್ರಿಕ ಕೌಶಲವನ್ನು ಪ್ರದರ್ಶಿಸಲಿದ್ದಾರೆ. ಮಂಗಳೂರಿನಲ್ಲಿ ಇಂತಹ ಉನ್ನತ ಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಜಿಲ್ಲೆಯ ಕ್ರೀಡಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ ಎಂದರು.

ಈ ಬಾರಿಯ ರಾಷ್ಟ್ರೀಯ ಚಾಂಪಿಯನ್‌ ಷಿಪ್‌ಗೆ ವಿಶೇಷ ಪ್ರಾಮುಖ್ಯತೆ ಇದೆ. ಇಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳು ಜೂನ್ ತಿಂಗಳಲ್ಲಿ ಲಿಥುವೇನಿಯಾದಲ್ಲಿ ನಡೆವ ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ ಷಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಸುವರ್ಣ ಅವಕಾಶ ಪಡೆಯಲಿದ್ದಾರೆ. ಈ ಕಾರಣದಿಂದಾಗಿ ದೇಶದ ಶ್ರೇಷ್ಠ ಕ್ರೀಡಾಪಟುಗಳ ನಡುವೆ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಅಂತರ ರಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರು ಮಾತನಾಡಿ, 24 ರಂದು ಬೆಳಿಗ್ಗೆ 10 ಗಂಟೆಗೆ ಚಾಂಪಿಯನ್‌ ಷಿಪ್‌ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾಧಿಕಾರಿ ದರ್ಶನ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಾಯೋಜಕರು ಉಪಸ್ಥಿತರಿರಲಿದ್ದಾರೆ. ಕ್ರೀಡಾಕೂಟವನ್ನು ಅಂತರ ರಾಷ್ಟ್ರೀಯ ಮಾನದಂಡಗಳನ್ವಯ ಆಯೋಜಿಸಲಾಗುತ್ತಿದ್ದು, ಅತ್ಯಾಧುನಿಕ ಸ್ಪರ್ಧಾ ಸಾಧನಗಳು, ಅನುಭವೀ ತಾಂತ್ರಿಕ ಅಧಿಕಾರಿಗಳು ಮತ್ತು ಕಟ್ಟುನಿಟ್ಟಿನ ಡೋಪಿಂಗ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಮೆಸ್ಕಾಂ ಅಧಿಕಾರಿ ಎ. ಉಮೇಶ್ ಗಟ್ಟಿ ಮತ್ತು ಮಧುಚಂದ್ರ ಎಂ.ಎಂ., ಹಾಗೂ ಕರ್ನಾಟಕ ಪವರ್‌ಲಿಫ್ಟಿಂಗ್ ಅಸೋಸಿಯೇಶನ್ ಕೋಶಾಧಿಕಾರಿ ಜಯರಾಮ್ ಶೆಟ್ಟಿಗಾರ್ ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma