ಮಂಗಳೂರು: ವಿಧಾನಸೌಧದ ಮುಖ್ಯದ್ವಾರವನ್ನು ಇದೇ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರವೇಶ ದ್ವಾರ ಅತ್ಯಂತ ಸುಂದರ ಕೆತ್ತನೆಗಳೊಂದಿಗೆ ಕರ್ನಾಟಕ ಶೈಲಿ ಹೊಂದಿದ್ದು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಮತ್ತು ಲೋಕೋಪಯೋಗಿ ಇಲಾಖೆ ಮೂಲಕ ಅಭಿವೃದ್ಧಿಪಡಿಸಲಾಗಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಮತ್ತು ಹೈಕೋರ್ಟ್ ಕಡೆಯಿಂದ ಪ್ರವೇಶ ದ್ವಾರಗಳನ್ನು ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭ ಆಗಲಿದೆ. ವಿಧಾನಸೌಧಕ್ಕೆ ಭಾಗಶಃ ವಿದ್ಯುತ್ ಪೂರೈಸುವ ಸೌರ ಫಲಕಗಳನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಇರುವ ಬೀದಿ ನಾಯಿಗಳಿಗೆ ಶ್ವಾನ ಆಶ್ರಯ ತಾಣ ನಿರ್ಮಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ನಮ್ಮ ಅಭಿಪ್ರಾಯ ಮತ್ತು ಯೋಜನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಬಗ್ಗೆ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.





