ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ. ಎ. ಸಲೀಂ ಅವರ ಸೇವಾ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದ್ದು, ಈ ವರ್ಷದ ಜೂನ್ ನಲ್ಲಿ ಸಲೀಂ ಅವರು ನಿವೃತ್ತರಾಗಬೇಕಿತ್ತು, ಆದರೆ ರಾಜ್ಯ ಸರ್ಕಾರ 2027 ರ ಅಕ್ಟೋಬರ್ 29 ರವರೆಗೆ ಸೇವಾ ಅವಧಿ ವಿಸ್ತರಣೆ ಮಾಡಿದೆ.
2025 ರ ಮೇ ನಲ್ಲಿ ಪ್ರಭಾರ ಡಿಜಿ ಐಜಿಪಿ ಆಗಿ ಅಧಿಕಾರ ವಹಿಸಿಕೊಂಡಿದ್ದ ಸಲೀಂ ಅವರನ್ನು 2025ರ ಅಗಸ್ಟ್ ನಲ್ಲಿ ಪೂರ್ಣಾವಧಿಗೆ ನೇಮಕ ಮಾಡಲಾಗಿತ್ತು. ರಾಜ್ಯದ 43 ನೇ ಡಿಜಿ-ಐಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಡಿಜಿಪಿಗೆ ಕನಿಷ್ಠ 2 ವರ್ಷಗಳ ಅಧಿಕಾರಾವಧಿ ಇರಬೇಕು. ಹೀಗಾಗಿ 22. 09. 2006 ರ ಸುಪ್ರೀಂ ಕೋರ್ಟ್ ಪ್ರಕಾಶ್ ಸಿಂಗ್ ಹಾಗೂ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪು ಅನುಸಾರ ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ ಅವರ ಅವಧಿ ಒಟ್ಟು 2 ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.
2025 ರ ಮೇ ನಲ್ಲಿ ಪ್ರಭಾರ ಡಿಜಿ ಐಜಿಪಿ ಆಗಿ ನೇಮಕವಾಗಿದ್ದ ಅವರನ್ನು 2025ರ ಅಗಸ್ಟ್ ನಲ್ಲಿ ಪೂರ್ಣಾವಧಿಗೆ ನೇಮಕ ಮಾಡಲಾಗಿತ್ತು. ಇದೀಗ ರಾಜ್ಯ ಸರ್ಕಾರ, 2027ರ ಅಕ್ಟೋಬರ್ 29 ರವರೆಗೆ ಸೇವಾ ಅವಧಿ ವಿಸ್ತರಣೆ ಮಾಡಿದೆ.
ಡಾ. ಎಂ ಎ ಸಲೀಂ ಅವರು 1993 ನೇ ಸಾಲಿನ ಕರ್ನಾಟಕ ಕೇಡರ್ ಅಧಿಕಾರಿ ಆಗಿದ್ದು, ಈ ಹಿಂದೆ ಕಲಬುರಗಿಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಡಾ. ಎಂ. ಎ ಸಲೀಂ ಅವರು ಸಿಐಡಿ ಡಿಜಿಪಿ ಆಗಿದ್ದರು. ಅಲ್ಲದೇ ಪ್ರಮುಖವಾಗಿ ಬೆಂಗಳೂರು ವಿಶೇಷ ಸಂಚಾರ ಕಮಿಷನರ್ ಆಗಿ ಅನೇಕ ಸಂಚಾರ ಸುಧಾರಣೆ ಜಾರಿಗೆ ತಂದಿದ್ದರು.





