ಮಂಗಳೂರು: ಮಂಗಳೂರು ವಿವಿ 44 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹಲೋತ್ ಅವರು ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಅವರಿಗೆ ಘೋಷಣೆ ಆಗಿರುವ ಗೌರವ ಡಾಕ್ಟರೇಟ್ ಅನ್ನು ಏಪ್ರಿಲ್ 13 ರಂದು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಎಲ್ಲ ಪದವೀಧರ ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪದವಿ ಪ್ರದಾನ ಮಾಡಿದರು. ಬಂಟ್ವಾಳ ಮಣಿನಾಲ್ಕೂರಿನ ಸಂಧ್ಯಾ ಸ್ನಾತಕೋತ್ತರ ಕನ್ನಡ ವಿಷಯದಲ್ಲಿ ಮೊದಲ ರ‍್ಯಾಂಕ್ ನೊಂದಿಗೆ ಚಿನ್ನದ ಪದಕ ಹಾಗೂ ಏಳು ನಗದು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಮಣಿನಾಲ್ಕೂರಿನ ಮೇಲಿನ ನೈಬೇಲಿನ ನೀಲಯ್ಯ ನಾಯ್ಕ ಹಾಗೂ ಬೇಬಿ ದಂಪತಿಯ ಪುತ್ರಿ ಆಗಿದ್ದಾರೆ. ಅವರು ಬಂಟ್ವಾಳದ ಎಸ್ ವಿಎಸ್ ಕಾಲೇಜಿನ ಬಿಎಸ್ಸಿಯಲ್ಲಿ ಪದವಿ ಮಾಡಿದ್ದಾರೆ. ಆದರೆ, ಸಾಹಿತ್ಯದೆಡೆಗಿನ ಆಸಕ್ತಿ ಅವರನ್ನು ಮಂಗಳೂರು ವಿವಿಯ ಕನ್ನಡ ವಿಭಾಗದತ್ತ ಸೆಳೆಯಿತು.
ಇವರ ತಂದೆ ಕೂಲಿ ಕೆಲಸ, ತಾಯಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು, ಇದರ ಜೊತೆಗೆ ಜೀವನೋಪಾಯಕ್ಕಾಗಿ ನಾಲ್ಕೈದು ದನ ಸಾಕುತ್ತಿದ್ದಾರೆ.
ಸಂಸದ ಕ್ಯಾ. ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡಿದರು. ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕುಲಸಚಿವ ಪ್ರೊ.ದೇವೇಂದ್ರಪ್ಪ (ಪರೀಕ್ಷಾಂಗ) ಗಣೇಶ್ ಸಂಜೀವ (ಪ್ರಭಾರ), ಹಣಕಾಸು ಅಧಿಕಾರಿ ಡಾ.ವೈ.ಸಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.





