ದ್ವಿತೀಯ ಪಿಯು ಫಲಿತಾಂಶ, ಆಳ್ವಾಸ್ ನ ದಿಶಾ ಫಸ್ಟ್, ಎಕ್ಸ್ ಪರ್ಟ್ ನ ಇಬ್ಬರು ವಿದ್ಯಾರ್ಥಿಗಳಿಗೆ ದಾಖಲೆಯ ಅಂಕ

Spread the love

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜು ರಾಜ್ಯಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ್ದು, ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮೂಡುಬಿದಿರೆ ಮೂಲದ ದಿಶಾ ಅಪ್ರತಿಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದ 6 ವಿಷಯಗಳಲ್ಲಿ 600 (ಶೇ100) ಅಂಕಗಳನ್ನು ಪಡೆವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಈ ಸಾಧನೆ ಇಡೀ ರಾಜ್ಯದ ಗಮನ ಸೆಳೆದಿದೆ.

ಫಲಿತಾಂಶ ಪ್ರಕಟ ಆಗುತ್ತಿದ್ದಂತೆಯೇ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದೆ. ವಿದ್ಯಾರ್ಥಿನಿ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ದಿಶಾ ಅವರಿಗೆ ಶುಭಾಶಯಗಳನ್ನು ತಿಳಿಸಿದರು.

ವಿಜ್ಞಾನದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜು ವಿದ್ಯಾರ್ಥಿಗಳ ಸಾಧನೆ:

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜು ವಿದ್ಯಾರ್ಥಿಗಳು ಭರ್ಜರಿ ಸಾಧನೆ ಮಾಡಿದ್ದು, ಇಬ್ಬರು ವಿದ್ಯಾರ್ಥಿಗಳು 600 ರಲ್ಲಿ 598 ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿಹೆಚ್ಚಿಸಿದ್ದಾರೆ.

‌ವಿಜ್ಞಾನ ವಿಭಾಗದಲ್ಲಿ 598 ಅಂಕ ಪಡೆದ ನಂದನ್ ನಾಯ್ಕ ತಮ್ಮ ಸಾಧನೆ ಕುರಿತು ಮಾತನಾಡಿ, ನಿರಂತರ ಶ್ರಮ ಹಾಕಿದ್ದರಿಂದ ಈ ಅಂಕ ಸಾಧನೆ ಮಾಡಲು ಸಾಧ್ಯ ಆಯಿತು. ನನ್ನ ಅಪ್ಪ-ಅಮ್ಮ ಮತ್ತು ಶಿಕ್ಷಕರಿಂದ ಸಾಧ್ಯ ಆಯಿತು ಎಂದು ತಿಳಿಸಿದರು.

ಸಮನ್ಯು ಎಸ್​. ಶೆಟ್ಟಿ ಕೂಡ ಸಂತಸ ವ್ಯಕ್ತಪಡಿಸಿ, ನನಗೆ 600 ರಲ್ಲಿ 598 ಅಂಕ ಬಂದಿವೆ. ಎರಡು ವಿಷಯಗಳಲ್ಲಿ ಒಂದೊಂದು ಅಂಕ ಕಡಿಮೆ ಆಗಿದೆ. ಉಳಿದ ಎಲ್ಲ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದೇನೆ. 599 ಅಂಕಗಳ ನಿರೀಕ್ಷೆ ಇತ್ತು. ಒಂದು ಅಂಕ ಕಡಿಮೆ ಆದರೂ, 598 ಅಂಕಗಳು ಉತ್ತಮ ಸಾಧನೆ ಖುಷಿ ತಂದಿದೆ ಎಂದರು.

ಅದೇ ಕಾಲೇಜಿನ ದೀಕ್ಷಾ ಶೆಣೈ, ಅದಿತಿ ಐ. ರೆಡ್ಡಿ, ಅಮೋಘ್ ಬಿ. ಲೋಕ್, ಸುಹಾನ್ ನಾರಾಯಣ ಬಿಲ್ಲವ ಅವರು ತಲಾ 600ರಲ್ಲಿ 596 ಅಂಕ ಪಡೆದು ಕಾಲೇಜಿನ ಗೌರವ ಹೆಚ್ಚಿಸಿದ್ದಾರೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *