ಮಂಗಳೂರು: ಮಳೆಗಾಲದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅವಘಡಕ್ಕೆ ಆಸ್ಪದ ಇಲ್ಲದಂತೆ ಸಕಲ ಸಿದ್ದತೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ವೇಳೆ ಅವರು ಮಾತನಾಡಿ, ಕಳೆದ ಮಳೆಗಾಲದಲ್ಲಿ ಪಾಲಿಕೆಯ ವ್ಯಾಪ್ತಿಯ ಹಲವೆಡೆ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದನ್ನು ಗಮನದಲ್ಲಿಟ್ಟುಕೊಂಡು ನೆರೆ ಪರಿಸ್ಥಿತಿಗೆ ಕಾರಣ, ಪ್ರವಾಹ ಮರುಕಳಿಸದಂತೆ ತುರ್ತಾಗಿ ನಡೆಯಬೇಕಿರುವ ಕಾರ್ಯ ಇತ್ಯಾದಿ ವಿಷಯಗಳ ಬಗ್ಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುವಂತೆ ಕ್ರಮ ವಹಿಸುವುದು, ಅಗತ್ಯ ಇರುವೆಡೆ ಹೂಳೆತ್ತುವುದು, ವಿಶೇಷವಾಗಿ ಪಂಪ್ ವೆಲ್ ಹಾಗೂ ಪಡೀಲ್ ರೈಲ್ವೆ ಅಂಡರ್ ಪಾಸ್ ಬಳಿ ನೀರು ಶೇಖರಣೆಗೊಳ್ಳದಂತೆ ಮತ್ತು ಸಂಭಾವ್ಯ ಗುಡ್ಡಕುಸಿತದ ಭಾಗಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಉಪ ಆಯುಕ್ತ ನರೇಶ್ ಶೆಣೈ, ತಹಶೀಲ್ದಾರ್ ರಮೇಶ್ ಬಾಬು ಸೇರಿದಂತೆ ಪಾಲಿಕೆ ಹಿರಿಯ ಅಧಿಕಾರಿಗಳು, ಮೆಸ್ಕಾಂ, ಅರಣ್ಯ, ಕಂದಾಯ, ಅಗ್ನಿಶಾಮಕ ಮೊದಲಾದ ಇಲಾಖೆ ಅಧಿಕಾರಿಗಳು ಇದ್ದರು.





