ಮಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಫಲಿತಾಂಶದಲ್ಲಿ ದಾಖಲೆಯ ಪ್ರಗತಿ ಕಂಡಿದ್ದು ಶೇ 98.40 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಅಗಿದ್ದಾರೆ. ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ದಾಖಲಿಸಿದೆ.
ಕಳೆದ ಬಾರಿ ದಕ ಜಿಲ್ಲೆಯ ಶೇ 94.41 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದರು. ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಈ ವರ್ಷ 27,207 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 26,771 ಮಂದಿ ಉತ್ತೀರ್ಣರಾಗಿದ್ದಾರೆ. 436 ಮಂದಿ ಅನುತ್ತೀರ್ಣರಾಗಿದ್ದಾರೆ. ಕಳೆದ ಬಾರಿಯೂ ಜಿಲ್ಲೆ ಪ್ರಥಮ ಸ್ಥಾನ ಗಳಿಸಿತ್ತು. 2,341 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು.
826 ತುಳು ಭಾಷಾ ವಿದ್ಯಾರ್ಥಿಗಳು ತೇರ್ಗಡೆ: ಈ ಬಾರಿಯ ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ 826 ವಿದ್ಯಾರ್ಥಿಗಳು ತುಳು ಭಾಷಾ ವಿಷಯದಲ್ಲಿ ತೇರ್ಗಡೆ ಆಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯ ಪ್ರೌಢಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಭಾಷೆ ಆಯ್ದಕೊಂಡು 826 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 826 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ತುಳು ಪಠ್ಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಹಾಗೂ ತುಳು ಭಾಷಾ ಶಿಕ್ಷಕರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿನಂದನೆ ಸಲ್ಲಿಸಿದ್ದಾರೆ.
ಸ್ಪೀಕರ್, ಉಸ್ತುವಾರಿ ಸಚಿವರಿಂದ ಅಭಿನಂದನೆ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರನ್ನು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಭಿನಂದಿಸಿದ್ದಾರೆ.
ಶೈಕ್ಷಣಿಕವಾಗಿ ಸದಾ ಘನತೆ, ಗೌರವವನ್ನು ಹೊಂದಿರುವ ಅವಿಭಜಿತ ದಕ್ಷಿಣ ಜಿಲ್ಲೆಯು ಶೈಕ್ಷಣಿಕ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಈ ಹಿರಿಮೆ ಜಿಲ್ಲೆಯ ಶೈಕ್ಷಣಿಕ ಉತ್ತುಂಗಕ್ಕೆ ಕಾರಣವಾಗಿದೆ ಎಂದು ಸ್ಪೀಕರ್ ಯು.ಟಿ ಖಾದರ್ ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಪರಿಶ್ರಮಕ್ಕೆ ಸದಾ ಹೆಸರುವಾಸಿಯಾಗಿದ್ದು, ಫಲಿತಾಂಶವು ಅದರ ಪ್ರತಿಫಲವಾಗಿದೆ. ಜಿಲ್ಲೆಯ ಶೈಕ್ಷಣಿಕ ಹಿರಿಮೆಯು ಉನ್ನತ ಮಟ್ಟದಲ್ಲಿ ಮುಂದುವರಿದಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿನಂದಿಸಿದ್ದಾರೆ.





