ಶ್ರೀನಿವಾಸ ವಿವಿ 8ನೇ ವಾರ್ಷಿಕ ಘಟಿಕೋತ್ಸವ, ಟಿ. ಸತೀಶ್ ಯು. ಪೈ,ಗೆ ಗೌರವ ಡಿ. ಲಿಟ್ ಪದವಿ: ಡಾ. ಶ್ರೀನಿವಾಸ್ ಮಯ್ಯ

Spread the love

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ 8 ನೇ ವರ್ಷದ ಘಟಿಕೋತ್ಸವ ಇದೇ 28 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಘಟಿಕೋತ್ಸವದಲ್ಲಿ 2769 ಪದವೀಧರರು ಹಾಗೂ ಸ್ನಾತಕೋತ್ತರ -626, 2023 ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ. ಶ್ರೀನಿವಾಸ್ ಮಯ್ಯ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶ್ವವಿದ್ಯಾಲಯವು ವಿವಿಧ ಕಾರ್ಯಕ್ರಮಗಳಿಗೆ 236 ರ‍್ಯಾಂಕ್ ಗಳನ್ನು ದಾಖಲಿಸಿದ್ದು, 48 ಪದವೀಧರರು ಘಟಿಕೋತ್ಸವದಲ್ಲಿ ಕುಲಾಧಿಪತಿಗಳ ಚಿನ್ನದ ಪದಕ ಸ್ವೀಕರಿಸಲಿದ್ದು, ಘಟಿಕೋತ್ಸವದಲ್ಲಿ 1 ಡಿ.ಎಸ್‌ಸಿ., 1 ಡಿ.ಲಿಟ್ ಮತ್ತು 118 ಮಂದಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗುತ್ತದೆ. ಡಿ.ಲಿಟ್ ಗೌರವ ಪದವಿಯನ್ನು ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ ನಿರ್ದೇಶಕ ಟಿ. ಸತೀಶ್ ಯು. ಪೈ, ಅವರಿಗೆ ನೀಡಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಮಧ್ಯಾಹ್ನ 3 ಗಂಟೆಗೆ ನಡೆವ ಘಟಿಕೋತ್ಸವ ಮುಂದುವರೆದ ಕಾರ್ಯಕ್ರಮದಲ್ಲಿ ಮಂಗಳೂರು ಕೆಐಒಸಿಎಲ್‌ ಲಿಮಿಟೆಡ್‌ನ ಉತ್ಪಾದನಾ ಹಾಗೂ ಯೋಜನಾ ವಿಭಾಗದ ಅಧ್ಯಕ್ಷ ಹಾಗೂ ನಿರ್ದೇಶಕರು ಮತ್ತು ಹಣಕಾಸು ವಿಭಾಗದ ಹೆಚ್ಚುವರಿ ಹೊಣೆಗಾರಿಕೆ ಮತ್ತು ನಿರ್ದೇಶಕ ಗಾಂತಿ ವೆಂಕಟ್‌ ಕಿರಣ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ ಪದವಿ ಪ್ರದಾನ ಕಾರ್ಯಕ್ರಮ 29 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಬೆಂಗಳೂರಿನ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ ಸೊಲ್ಯೂಷನ್ ಆರ್ಕಿಟೆಕ್ಟ್ ಆಗಿರುವ ಅರವಿಂದ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಒಟ್ಟು 1058 ಪದವೀಧರರಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನಿಸಲಾಗುವುದು ಎಂದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ. ಶಾಮ ರಾವ್ ಫೌಂಡೇಶನ್ ಅಧ್ಯಕ್ಷ ಡಾ ಎ. ಶ್ರೀನಿವಾಸ್ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾಲಯವು ತನ್ನ ಮಾಜಿ ಕುಲಾಧಿಪತಿಗಳಾದ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಆಶೀರ್ವಾದಗಳನ್ನು ಸ್ಮರಿಸಲಾಗುತ್ತದೆ. ಗುಣಮಟ್ಟದ ಶಿಕ್ಷಣದ ಬಗ್ಗೆ ಅವರ ಬದ್ಧತೆಯು ಸಂಸ್ಥೆಯ ಬೆಳವಣಿಗೆ ಮತ್ತು ಶ್ರೇಷ್ಠತೆಗೆ ಬಲವಾದ ಅಡಿಪಾಯವನ್ನು ನಿರ್ಮಿಸಿದೆ ಎಂದರು.

ಎ. ವಿಜಯಲಕ್ಷ್ಮಿ ಆರ್. ರಾವ್, ಎ. ಮಿತ್ರಾ ಎಸ್. ರಾವ್ , ಪದ್ಮಿನಿ ಕುಮಾರ್ , ಡಾ. ಸತ್ಯನಾರಾಯಣ ರೆಡ್ಡಿ, ಡಾ. ಅನಿಲ್ ಕುಮಾರ್ , ಡಾ. ಅಜಯ್ ಕುಮಾರ್, ಆದಿತ್ಯ ಕುಮಾರ್ ಮಯ್ಯ ಪಾಲ್ಗೊಳ್ಳುವರು. ದಾರ್ಶನಿಕ ಶಿಕ್ಷಣ ತಜ್ಞ, ಡಾ ಸಿಎ ರಾಘವೇಂದ್ರ ರಾವ್ ಅವರು 1988 ರಲ್ಲಿ ಮೊದಲ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಕೇವಲ 7 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು. ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳಲ್ಲಿ 12,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸುಮಾರು 5,000 ಅಧ್ಯಾಪಕರು ಮತ್ತು ಸಿಬ್ಬಂದಿ ವಿದ್ಯಾರ್ಥಿ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ರಿಜಿಸ್ಟ್ರಾರ್ ಡಾ.ಅನಿಲ್ ಕುಮಾರ್, ರಿಜಿಸ್ಟ್ರಾರ್-ಅಭಿವೃದ್ಧಿ ಡಾ. ಅಜಯ್ ಕುಮಾರ್, ಶ್ರೀನಿವಾಸ ಕಾಲೇಜು ಆಫ್‌ ಫಾರ್ಮಸಿಯ ಪ್ರಾಂಶುಪಾಲರು, ನಿರ್ದೇಶಕ ಡಾ. ರಾಮಕೃಷ್ಣ ಶಬರಾಯ ಎ ಇದ್ದರು.

ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆ

ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆ ಇದೇ 30 ಬೆಳಿಗ್ಗೆ 9. 30 ಕ್ಕೆ ಆಯೋಜಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನವನ್ನು ತೋರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳ ಸಂಸ್ಥಾಪಕರ ದಿನಾಚರಣೆ ಮತ್ತು ಕಾಲೇಜು ದಿನಾಚರಣೆ ಇದೇ 31 ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ಉಪಾಧ್ಯಕ್ಷೆ ಎಸ್. ಶಾಂತಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು ಸಂಸ್ಥಾಪಕರ ದಿನದ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ. ಶ್ರೀನಿವಾಸ್ ಮಯ್ಯ ತಿಳಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *