ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕಿಸುವ ಹೆದ್ದಾರಿ ಬದಿಯ ರಸ್ತೆಯ ಕಾಂಕ್ರಿಟ್ ಕಾಮಗಾರಿ ಹಾಗೂ ಟ್ರಕ್ ಯಾರ್ಡ್ ಗುರುವಾರದಿಂದ ಆರಂಭವಾಗಲಿದ್ದು, 11 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಕಾರ್ಯ ನಡೆಯಲಿದೆ. ಎನ್ ಎಂಪಿಎ ಇದಕ್ಕೆ ಅನುದಾನ ನೀಡಲಿದ್ದು, ಎನ್ ಎಂಪಿ ಎ ಗೆ ಮನವಿ ಮಾಡಿದ್ದರಿಂದ ಬಂದರು ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಅವರು ಹೇಳಿದರು.
ಕೆಐಎಡಿಬಿ, ಸಂಚಾರ ಪೊಲೀಸ್ ಹಾಗೂ ಬಂದರು ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಕಾಮಗಾರಿ ಅವಧಿ, ಸಂಚಾರ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕಾಮಗಾರಿ ಕುರಿತು ಚರ್ಚೆ ನಡೆಸಲಾಯಿತು ಎಂದರು.
ಕಾಮಗಾರಿ ಸುಗಮವಾಗಿ ನಡೆಸುವ ಉದ್ದೇಶದಿಂದ ಸಂಬಂಧಿತ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಪೊಲೀಸರು ಆದೇಶ ಹೊರಡಿಸಲಿದ್ದು, ಗುರುವಾರದಿಂದ ಪರ್ಯಾಯ ಸಂಚಾರ ಅವಕಾಶ ಮಾಡಿ ಕೊಡಲಾಗುವುದು. ವಿಶೇಷವಾಗಿ ಭಾರೀ ವಾಹನಗಳ ಓಡಾಟ ಹೆಚ್ಚಿರುವ ಈ ಪ್ರದೇಶದಲ್ಲಿ ಸಂಚಾರ ನಿಯಂತ್ರಣ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶವು ಪ್ರಮುಖ ಉದ್ಯಮ ವಲಯ ಆಗಿರುವುದರಿಂದ, ದೀರ್ಘಕಾಲದಿಂದ ರಸ್ತೆ ದುರಸ್ತಿ ಹಾಗೂ ಕಾಂಕ್ರಿಟ್ ನಿರ್ಮಾಣದ ಬೇಡಿಕೆ ಕೇಳಿ ಬರುತ್ತಿತ್ತು. ಈಗ ಕಾಮಗಾರಿ ಆರಂಭವಾಗುತ್ತಿರುವುದರಿಂದ ಸ್ಥಳೀಯ ಉದ್ಯಮಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇನ್ನು ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಚಾರ ಪೊಲೀಸ್ ಇನ್ ಸ್ಪೆಕ್ಟರ್ ಶಿವಕುಮಾರ್, ಬಂದರು ಪ್ರಾಧಿಕಾರ, ಕೆಐಎಡಿಬಿ ಅಧಿಕಾರಿಗಳು ಸಭೆಯಲ್ಲಿ ಇದ್ದರು.





