ಇದೇ 18 ರಿಂದ 24 ರವರಿಗೆ ಶನೈಶ್ಚರ ದೇವಸ್ಥಾನದ ಬ್ರಹ್ಮಕಳಶ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ: ನಳಿನ್ ಕುಮಾರ್ ಕಟೀಲ್

Spread the love

ಮಂಗಳೂರು: ಇಲ್ಲಿನ ಪದವು ಕುಲಶೇಖರದಲ್ಲಿ ಹಿಂದೂ ಯುವಸೇನಾ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರ ಶನೈಶ್ಚರ ದೇವಸ್ಥಾನದ ಬ್ರಹ್ಮ ಕಳಶ ಉತ್ಸವ ಇದೇ 18 ರಿಂದ 24 ರವರಿಗೆ ನಡೆಯಲಿದ್ದು, ಇದರ ಭಾಗವಾಗಿ ಪೂರ್ಣ ಪ್ರಮಾಣದ ಸಿದ್ದತೆಗಳು ನಡೆಯುತ್ತಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಸಾಕಷ್ಟು ಭಕ್ತರು ಬರುವ ನಿರೀಕ್ಷೆ ಇದ್ದು, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಪಕ್ಕದಲ್ಲಿಯೇ ಇರುವ ಜಾಗದಲ್ಲಿ ಸಭಾಂಗಣದ ವ್ಯವಸ್ಥೆ ಮಾಡಲಾಗಿದ್ದು, ಮುಸ್ಲಿಂ ಬಂಧುವೊಬ್ಬರು ನೀಡಿದ ಜಾಗದಲ್ಲಿ ಪಾಕಶಾಲೆ ಸಿದ್ಧಪಡಿಸಲಾಗಿದ್ದು, ಊಟದ ವ್ಯವಸ್ಥೆಗೆ ವಿಶಾಲ ಜಾಗವನ್ನು ಕಲ್ಪಿಸಲಾಗಿದೆ. ಅನ್ನ ಸಂತರ್ಪಣೆಗೆ ಇನ್ನೂ ಎರಡು ಹೆಚ್ಚುವರಿ ಜಾಗ ಗುರುತಿಸಲಾಗಿದೆ. ದೇವಸ್ಥಾನದ ಮುಂಭಾಗ ಖರೀದಿಸಿದ ಹಾಗೂ ಖರೀದಿಸಬೇಕಾದ ಜಾಗದಲ್ಲಿ ದೊಡ್ಡ ಯಾಗಶಾಲೆ ಹಾಕಲಾಗಿದೆ. ವಾಹನಗಳ ದಟ್ಟಣೆ ನಿಯಂತ್ರಿಸಲು ಒನ್‌ವೇ ವ್ಯವಸ್ಥೆ ಮಾಡಲಾಗಿದ್ದು, ಪದವು ಮೇಗಿನಮನೆಯ ಕೆಳಗಿನ ಗ್ರೌಂಡ್ ಸೇರಿದಂತೆ ಒಟ್ಟು ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಮುಂದಿನ ಹಾಲ್‌ನಲ್ಲಿ ಹೊರೆಕಾಣಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಏ. 24 ರಂದು ಚಂಡಿಕಾಯಾಗ ಹಾಗೂ ಸಗ್ರಹ ಶನೈಶ್ಚರ ಮಹಾಯಾಗದ ಪೂರ್ಣಾಹುತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿವೆ. ಉತ್ಸವದ ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ, ವಿದ್ವಾಂಸರಿಂದ ಧಾರ್ಮಿಕ ಸಭೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಉತ್ಸವದ ಭಾಗವಾಗಿ ಪಾವಂಜಿ ಮೇಳದವರಿಂದ ಯಕ್ಷಗಾನ, ಲಲಿತೆ ಕಲಾವಿದರಿಂದ ಶನಿ ಮಹಾತ್ಮೆ ನಾಟಕ, ಸೌದಾಮಿನಿ ರಾವ್ ಮತ್ತು ಬಳಗದಿಂದ ನೃತ್ಯರಂಜಿನಿ, ವಿಧಾತ್ರಿ ಕಲಾವಿದರಿಂದ ಜೈ ಹನುಮಾನ್ ಸಿನೆ ನಾಟಕ ಹಾಗೂ ಜಗದೀಶ್ ಕಟೀಲು ಸಂಯೋಜನೆಯಲ್ಲಿ ಭಕ್ತಿಸಂಗೀತ ಲಹರಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ಮಂಗಳೂರು ನಗರದ ಈ ಭಾಗದಲ್ಲಿ ಪ್ರಪ್ರಥಮವಾಗಿ ಶನೈಶ್ಚರ ಮಂದಿರವು ನಿರ್ಮಾಣವಾಗಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗೊಂಡಿದ್ದು, ಮಂಗಳೂರು ನಗರದ ಜನತೆ ಈ ಪವಿತ್ರ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.

ನಳಿನ್ ಕುಮಾರ್ ಕಟೀಲ್ ಅವರು ಮುಂಬೈಗೆ ಹೋಗಿ ಅಲ್ಲಿನ ದಾನಿಗಳ ಜತೆಗೆ ಸಭೆ ನಡೆಸಿ ವಿಶೇಷ ಸಹಕಾರವನ್ನು ತಂದಿದ್ದಾರೆ. ಆರಂಭದಲ್ಲಿ ರಾಮಚಂದ್ರ ಚೌಟರು ಕೇವಲ ನಾಲ್ಕು ಸೆಂಟ್ಸ್ ಜಾಗದಲ್ಲಿ ದೇವರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡುತ್ತಾ ಬಂದಿದ್ದರು. ನಂತರ 8 ಸೆಂಟ್ಸ್ ಜಾಗ ಖರೀದಿಸಲಾಯಿತು. ಇದೀಗ ಸಮಿತಿಯ ಮತ್ತು ಹಿಂದೂ ಯುವಸೇನೆ ಸಹಕಾರದಿಂದ ಇನ್ನೂ 20 ಸೆಂಟ್ಸ್ ಜಾಗವನ್ನು ಖರೀದಿ ಮಾಡಲಾಗುತ್ತಿದೆ. ಸ್ಥಳೀಯರ ಸಹಕಾರದಿಂದ ಪ್ರತಿ ಚದರ ಅಡಿ ಮತ್ತು ಸೆಂಟ್ಸ್ ಜಾಗದ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲರ ಒಗ್ಗಟ್ಟಿನ ಶ್ರಮದಿಂದ ಈ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿದೆ. ನಮ್ಮೆಲ್ಲರ ಕಷ್ಟಗಳನ್ನು ನಿವಾರಿಸಲು ಶನಿದೇವರ ಕೃಪೆ ಅಗತ್ಯ ಎಂದರು.

ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ, ಪೂಜಾ ಸಮಿತಿ ಅಧ್ಯಕ್ಷ ರಾಮಚಂದ್ರ ಚೌಟ, ಮಾತೃ ಮಂಡಳಿ ಅಧ್ಯಕ್ಷೆ ವಿಜಯ ಅರುಣ ಹಾಗೂ ಮೋನಪ್ಪ ಭಂಡಾರಿ, ಶಕೀಲ ಕಾವ, ಕಾವ್ಯ ನಟರಾಜ್ ಇದ್ದರು.

ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭ: ಕಟೀಲ್

ಇದೇ 18 ರಿಂದ 24ರ ವರೆಗೆ ಬಾಲಂಭಟ್ ಮನೆತನದ ವಿದ್ವಾನ್ ವೇದಮೂರ್ತಿ ಎಂ. ಗಿರಿಧರ ಭಟ್ ಮತ್ತು ವೇದಮೂರ್ತಿ ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿಗಳು ಏ. 18ರ ಶನಿವಾರದಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭ ಆಗಲಿವೆ. ಅಂದಿನಿಂದ ಏ. 22ರ ತನಕ 108 ಕಾಯಿ ಗಣಯಾಗ, ರುದ್ರಯಾಗ ಹಾಗೂ ಲಕ್ಷ್ಮೀನಾರಾಯಣ ಪ್ರಧಾನ ಹೋಮಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ. ಏ. 23, ಗುರುವಾರ ಮಹಾಗಣಪತಿ, ದುರ್ಗಾದೇವಿ ಹಾಗೂ ನವಗ್ರಹ ಸಹಿತ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ ನಡೆಯಲಿದೆ. ಇದರೊಂದಿಗೆ ಶಿಖರ ಕಲಶ ಪ್ರತಿಷ್ಠೆ ಮತ್ತು ದೇವರಿಗೆ ಪಂಚಕಲಶ ಸಹಿತ ಬ್ರಹ್ಮಕಲಶಾಭಿಷೇಕವು ಅತ್ಯಂತ ವೈಭವದಿಂದ ಜರುಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma