ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ, ಸ್ಪರ್ಧಾತ್ಮಕ ಪರೀಕ್ಷೆಗಳ ಚಿತ್ತ ಹರಿಸಿ ಎಂದು ನ್ಯಾ. ವಿಶ್ವಜಿತ್ ಶೆಟ್ಟಿ ಸವಣೂರು

Spread the love

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದರೂ, ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಯಾದಗಿರಿಯಂತಹ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿಯಲ್ಲಿ ಕೊನೆ ಸ್ಥಾನದಲ್ಲಿದ್ದರೂ ಯುಪಿಎಸ್‌ಸಿಯಲ್ಲಿ ಹೆಚ್ಚು ಸಾಧನೆ ಮಾಡುತ್ತಿವೆ. ಬಂಟರ ಸಂಘವು ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಇಂತಹ ಪರೀಕ್ಷೆ ಎದುರಿಸಲು ವಿಶೇಷ ತರಬೇತಿ ನೀಡುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಸವಣೂರು ಸಲಹೆ ನೀಡಿದರು.

ಪುರಭವನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ, ಸಮಾಜದ ಹಿರಿಯರು, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರು ಮಾತನಾಡಿ, ಸಂಸ್ಕೃತಿ ನಾಶ ಆದರೆ ದೇಶವೇ ವಿಭಜನೆಗೊಳ್ಳಬಹುದು, ಆದ್ದರಿಂದ ತುಳು ಭಾಷೆ ಮತ್ತು ದೈವಾರಾಧನೆಯಂತಹ ನಮ್ಮ ಮೂಲ ಪರಂಪರೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ತುಳು ಭಾಷೆಯನ್ನು ಮಾತನಾಡುತ್ತಾ ಅದರ ಬೆಳವಣಿಗೆಗೆ ಶ್ರಮಿಸಬೇಕು. ದೈವಗಳ ಕೋಲ ಮತ್ತು ಇತರ ಆಚರಣೆಗಳಿಗೆ ಮಕ್ಕಳನ್ನು ಕಡ್ಡಾಯವಾಗಿ ಕರೆದೊಯ್ಯಬೇಕು ಎಂದರು.

ಬಂಟ ಸಮುದಾಯದವರು ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ. ಆದರೆ, ಇಷ್ಟೊಂದು ಶೈಕ್ಷಣಿಕ ಸೌಲಭ್ಯಗಳಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಸಮುದಾಯದವರ ಸಂಖ್ಯೆ ಕಡಿಮೆಯಾಗಿರುವುದು ಆತಂಕಕಾರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವದ ಜತೆಗೆ ಸ್ವಾಗತಿಸಿ ಮಾತನಾಡಿ, ಜನರು ಹಳ್ಳಿಯಲ್ಲಿದ್ದು, ಯಾವುದೇ ಸಂಪರ್ಕ ಸಾಧನ ಇರಲಿಲ್ಲ. ಆಧುನಿಕ ಶಿಕ್ಷಣದ ಅಗತ್ಯ ಮನಗಂಡ ನಾಡವರು ಎತ್ತಿನ ಗಾಡಿಯ ಮೂಲಕ ಸಂಚರಿಸಿ, ದೋಣಿಯ ಮೂಲಕ ನದಿಗಳನ್ನು ದಾಟಿ ಕಷ್ಟಪಟ್ಟು ನಗರದಲ್ಲಿ ಆಧುನಿಕ ಶಿಕ್ಷಣ ಪಡೆದರು. ಮಕ್ಕಳು ನಗರದಲ್ಲಿ ಉಳಿದು ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ 1908 ರಲ್ಲಿ ಬಂಟ್ಸ್ ಹಾಸ್ಟೆಲ್ ನಲ್ಲಿ ಹಾಸ್ಟೆಲ್‌ ಸ್ಥಾಪನೆ ಮಾಡಿದೇವು. ಬೇರೆ ಬೇರೆ ಸ್ಥಳಗಳಲ್ಲಿ ಆಸ್ತಿ ಖರೀದಿಸಿ ಹಾಸ್ಟೆಲ್ ನಿರ್ಮಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರು. ಅಂತಹ ಹಿರಿಯರನ್ನು ಸ್ಮರಿಸುತ್ತೇವೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಅವರು, ವಿವಿಧ ರಂಗಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಧಕರನ್ನು ಸನ್ಮಾನಿಸುವುದು ಸ್ವಾಗತಾರ್ಹ, ಆದರೆ ಅವರ ಸಾಧನೆಯ ಹಿಂದಿರುವ ನಿಜವಾದ ಪರಿಶ್ರಮಿಗಳನ್ನೂ ಸಮಾಜ ಗುರುತಿಸಿ ಗೌರವಿಸಬೇಕು ಎಂದರು.

ಕೊಡ್ಮಾಣ್ ಮೋಹನದೇವ ಆಳ್ವ ಹಾಗೂ ಡಾ. ಎಮ್. ಕೆ. ಶೈಲಜಾ ಆಳ್ವ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ. ಎಂ. ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಇದ್ದರು. ವೇಣುಗೋಪಾಲ ಶೆಟ್ಟಿ ಅವರು ಸಮಾಜದ ಹಿನ್ನೆಲೆ ವಿವರಿಸಿ ಕಾರ್ಯಕ್ರಮ ನಿರೂಪಿಸಿದರು, ದಿವ್ಯ ವಿ. ಶೆಟ್ಟಿ ಅವರು ಪ್ರಾರ್ಥನೆ ಸಲ್ಲಿಸಿದರು.

ಸಮಾಜದ ಸಾಧಕ ಸಾಧಕರಿಗೆ ಸನ್ಮಾನ

ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಡಾ. ಕೊಡ್ಮಾಣ್ ನಾಗಪ್ಪ ಆಳ್ವ ಮತ್ತು ಕಲ್ಯಾಣಿ ಆಳ್ವ ಸ್ಮರಣಾರ್ಥ ಪ್ರಶಸ್ತಿ ಹಾಗೂ ಸನ್ಮಾನಗಳನ್ನು ನೀಡಿ ಗೌರವಿಸಲಾಯಿತು. ಡಾ. ಸತೀಶ್ ಭಂಡಾರಿ (ವೈದ್ಯಕೀಯ), ಪ್ರೊ. ವಸಂತ್ ಶೆಟ್ಟಿ ಮುಳ್ಳಾಡ್ (ಶೈಕ್ಷಣಿಕ), ಕೆ. ಉಷಾ ಪಿ. ರೈ (ಸಾಹಿತ್ಯ), ಗುರುಕಿರಣ್ ಶೆಟ್ಟಿ (ಸಂಗೀತ), ವಿದುಷಿ ನಯನ ವಿ. ರೈ ಕುದ್ಕಾಡಿ (ನೃತ್ಯ), ಲೆ. ಕರ್ನಲ್ ಅಜಿತ್ ಕುಮಾರ್ ಶೆಟ್ಟಿ (ದೇಶ ಸೇವೆ), ಪ್ರಶಾಂತ್ ರೈ ಪುತ್ತೂರು ಮತ್ತು ಚಿಂತನ್ ಎಸ್. ಶೆಟ್ಟಿ (ಕ್ರೀಡೆ) ಅವರು ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಕೈಗಾರಿಕಾ ಕ್ಷೇತ್ರದಲ್ಲಿ ವಿವೇಕ್ ಶೆಟ್ಟಿ ಬೊಳ್ಯಗುತ್ತು ಮತ್ತು ಕರುಣಾಕರ ಶೆಟ್ಟಿ ಮದ್ಯಗುತ್ತು, ಸಾಂಸ್ಕೃತಿಕ ರಂಗದಲ್ಲಿ ಪ್ರಕಾಶ್ ಭಂಡಾರಿ, ಧಾರ್ಮಿಕ ಕ್ಷೇತ್ರದಲ್ಲಿ ಕೆ. ಕೆ. ಶೆಟ್ಟಿ ಕುತ್ತಿಕಾರ್ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಆತಿಥ್ಯ ಉದ್ಯಮದಲ್ಲಿ ವೇಣುಗೋಪಾಲ್ ಎಲ್. ಶೆಟ್ಟಿ, ನಿರ್ಮಾಣ ಕ್ಷೇತ್ರದಲ್ಲಿ ಮುಗ್ರೋಡಿ ಸುಧಾಕರ್ ಶೆಟ್ಟಿ, ಸಂಶೋಧನಾ ಕ್ಷೇತ್ರದಲ್ಲಿ ಡಾ. ನವೀನ್ ಚಂದ್ರ ಶೆಟ್ಟಿ, ಮತ್ತು ದೈವಾರಾಧನೆ ಕ್ಷೇತ್ರದಲ್ಲಿ ಡಾ. ಅಶೋಕ್ ಆಳ್ವ ಅವರು ಗೌರವಕ್ಕೆ ಪಾತ್ರರಾದರು. ಸಮಾಜ ಸೇವೆಯಲ್ಲಿ ಕಂಚನೂರು ಸೋಮಶೇಖರ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ದಿನೇಶ್ ಆಳ್ವ, ಕೃಷಿ ಕ್ಷೇತ್ರದಲ್ಲಿ ಮುರ ಸದಾಶಿವ ಶೆಟ್ಟಿ ಎಕ್ಕಾರು, ಕೃಷಿ ಅಭಿವೃದ್ಧಿಗಾಗಿ ಡಾ. ಸರಿತಾ ಹೆಗ್ಡೆ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ರವೀಂದ್ರನಾಥ ಮಾರ್ಲ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಕಲೆ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪಿ. ಕಿಶನ್ ಹೆಗ್ಡೆ ಅವರಿಗೆ ವಿಶೇಷ ಗೌರವ ಸಮರ್ಪಿಸಲಾಯಿತು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *