ದ.ಕ, ಉಡುಪಿ ಉಭಯ ಜಿಲ್ಲೆಗಳ ಶಾಲೆಗಳ ಅಭಿವೃದ್ಧಿಗೆ ಎಂಆರ್‌ಪಿಎಲ್‌ ನಿಧಿ: ಎಂಎಲ್ಸಿ ಮಂಜುನಾಥ ಭಂಡಾರಿ

1103

ಉಡುಪಿ: ಕರಾವಳಿಯ ಎರಡು ಜಿಲ್ಲೆಗಳ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ ಅವರು ನಡೆಸಿದ ನಿರಂತರ ಪ್ರಯತ್ನಕ್ಕೆ ಈಗ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ.

ಶಾಸಕರ ವಿಶೇಷ ಶಿಫಾರಸು ಪುರಸ್ಕರಿಸಿರುವ ಮಂಗಳೂರು ಎಂಆರ್ ಪಿಎಲ್ ಸಂಸ್ಥೆಯು, ತನ್ನ ಸಿ.ಎಸ್.ಆರ್ ನಿಧಿಯಡಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ, ಅದಕ್ಕನುಗುಣವಾಗಿ ತರಗತಿ ಕೊಠಡಿಗಳ ಸೌಲಭ್ಯವಿರಲಿಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಮಂಜುನಾಥ ಭಂಡಾರಿ ಅವರು, ಸ್ವತಃ ಶಾಲೆಗಳಿಗೆ ಭೇಟಿ ನೀಡಿ ಅಗತ್ಯತೆಗಳನ್ನು ಮನಗಂಡಿದ್ದರು. ಬಡ ಮತ್ತು ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸುಸಜ್ಜಿತ ಕಟ್ಟಡಗಳ ಅಗತ್ಯವಿದೆ ಎಂದು ಪ್ರತಿಪಾದಿಸಿ ಎಂಆರ್‌ಪಿಎಲ್‌ ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದು ವಿಶೇಷ ಅನುದಾನಕ್ಕೆ ಒತ್ತಾಯಿಸಿದ್ದರು.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ (ಪ್ರಾಥಮಿಕ ವಿಭಾಗ) ಹೊಸ ಕೊಠಡಿ ನಿರ್ಮಾಣಕ್ಕೆ ₹95 ಲಕ್ಷ, ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 95 ಲಕ್ಷ ಹಾಗೂ ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಅಭಿವೃದ್ಧಿ ಕಾಮಗಾರಿಗಳಿಗೆ ₹78.80 ಲಕ್ಷ ಮಂಜೂರಾಗಿದೆ. ಇದರೊಂದಿಗೆ ಬಜಗೋಳಿ ಸರ್ಕಾರಿ ಪ್ರೌಢಶಾಲೆ, ಸಿದ್ದಾಪುರ ಸರ್ಕಾರಿ ಪ್ರೌಢಶಾಲೆ ಮತ್ತು ಬಸರೂರು ಸರ್ಕಾರಿ ಪ್ರೌಢಶಾಲೆ ಈ ಮೂರೂ ಸಂಸ್ಥೆಗಳಿಗೆ ತಲಾ 78.80 ಲಕ್ಷದಂತೆ ಒಟ್ಟು 2.36 ಕೋಟಿಗೂ ಅಧಿಕ ಅನುದಾನ ಹಂಚಿಕೆಯಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶೈಕ್ಷಣಿಕ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಬೆಂಜನಪದವು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಾಣಕ್ಕೆ 92 ಲಕ್ಷ ಹಾಗೂ ಮೂರು ಹೊಸ ತರಗತಿ ಕೊಠಡಿಗಳ ನಿರ್ಮಾಣಕ್ಕಾಗಿ 40 ಲಕ್ಷ ಮೀಸಲಿಡಲಾಗಿದೆ. ಅದೇ ರೀತಿ ವಾಮದಪದವು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ 80 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಸೌಲಭ್ಯ ದೊರೆಯಲಿದೆ ಎಂದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma