ಸಮೀಕ್ಷೆ– ನಿರೀಕ್ಷೆ ಕ್ಯಾನ್ಸರ್ ಜಾಗೃತಿಗೆ ಹೊಸ ಮುನ್ನುಡಿ ಪುಸ್ತಕ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕೋಲಜಿ ಹೊಸ ಪ್ರಯತ್ನ: ಎಂಎಲ್ಸಿ ಐವನ್ ಡಿಸೋಜ

Spread the love

ಮಂಗಳೂರು: ಕ್ಯಾನ್ಸರ್ ರೋಗಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಜೊತೆಗೆ ಜನರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಉಂಟು ಮಾಡದರೇ ಈ ಕಾಯಿಲೆಯ ಬಗ್ಗೆ ಇರುವ ಆತಂಕ ದೂರ ಮಾಡಲು ಸಾಧ್ಯ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ್ ಅವರು ಹೇಳಿದರು.

ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಹಾಗೂ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮೀಕ್ಷೆ ನಿರೀಕ್ಷೆ ಕ್ಯಾನ್ಸರ್ ಜಾಗೃತಿಯಲ್ಲಿ ಭರವಸೆಯ ಹೊಸ ಮುನ್ನಡಿ ಎಂ ಸಮೀಕ್ಷಾ ವರದಿಯ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮತನಾಡಿದರು.

ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರು ರೋಗ ಬಂತು ಎಂದ ಕ್ಷಣವೇ ಎಲ್ಲವೂ ಮುಗಿಯಿತು, ಇನ್ನು ಸಾವು ಖಚಿತ ಎಂಬ ಮನೋಭಾವದಲ್ಲಿ ಇರುತ್ತಾರೆ. ಅಂತಹ ಮನೋಭಾವದಿಂದ ರೋಗಿಗಳನ್ನು ಹೊರಗಡೆಗೆ ತರುವ ಕೆಲಸವನ್ನು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ ತನ್ನದೇ ಪರಿಧಿಯಲ್ಲಿ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಸುಮಾರು 10,948 ಮಂದಿಯ ಸಮೀಕ್ಷೆಯಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು, ಕಾರ್ಮಿಕರು, ವೃತ್ತಿಪರರು, ವ್ಯಾಪಾರಿಗಳು ಮತ್ತು ಇನ್ನಿತರ ಸಮುದಾಯದವರು ಭಾಗವಹಿಸಿದ್ದಾರೆ. ಈ ಸಮೀಕ್ಷೆ ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಆರಂಭಿಕ ಪತ್ತೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಜಾಗೃತಿ, ಇರುವ ತಪ್ಪು ಕಲ್ಪನೆಗಳು ಮತ್ತು ಪ್ರಮುಖ ಅಡೆತಡೆಗಳ ಕುರಿತು ಮಹತ್ವದ ಒಳನೋಟಗಳನ್ನು ಚೆಲ್ಲಿದೆ. ಸರಕಾರ ಮಾಡಬೇಕಾಗಿರುವ ಕೆಲಸವನ್ನು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ ವೈದ್ಯರ ತಂಡವು ಮಾಡುತ್ತಿದೆ. ಈ ಆಸ್ಪತ್ರೆಯ ಮುಖ್ಯಸ್ಥ ಡಾ.ಸುರೇಶ್ ರಾವ್ ಅವರ ಸಾರಥ್ಯದಲ್ಲಿ ಸಾಮಾಜಿಕ ಕಳಕಳಿಯ ಹಾಗೂ ಆರೋಗ್ಯ ಕಾಳಜಿ ಬಿಂಬಿಸುವ ಕೆಲಸಗಳು ಆಗುತ್ತಿದೆ ಎಂದರು.

ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿಯ ಮುಖ್ಯಸ್ಥ ಹಾಗೂ ನಿರ್ದೇಶಕ ಡಾ. ಸುರೇಶ್ ರಾವ್ ಅವರು ಮಾತನಾಡಿ, ಸಮೀಕ್ಷೆಯ ವರದಿ ಪ್ರಕಾರ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಮೂಲಭೂತ ಜಾಗೃತಿ ಉತ್ತಮ ಮಟ್ಟದಲ್ಲಿದೆ ಎಂದು ಕಂಡು ಬಂದಿದೆ. ಈ ಸಮೀಕ್ಷೆಯಲ್ಲಿ ಶೇ 90 ಕ್ಕಿಂತ ಹೆಚ್ಚು ಪ್ರತಿಕ್ರಿಯೆದಾರರು ತಂಬಾಕು ಸೇವನೆಯು ಕ್ಯಾನ್ಸರ್‌ಗೆ ಕಾರಣ ಆಗುತ್ತಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಇನ್ನು ಬಹುತೇಕರು ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಚಿಕಿತ್ಸೆಯು ಹೆಚ್ಚು ಫಲಕಾರಿ ಮತ್ತು ಬದುಕುಳಿಯುವ ಸಾಧ್ಯತೆಯು ಅಧಿಕ ಎಂದು ಅರಿತಿದ್ದಾರೆ. ಜತೆಗೆ, ಕ್ಯಾನ್ಸರ್ ಒಂದು ಸಾಂಕ್ರಾಮಿಕ ರಹಿತ ರೋಗ, ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ ಎಂಬ ಅರಿವು ಕೂಡ ಜನರಲ್ಲಿ ವ್ಯಾಪಕ ಆಗಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ಜಾಗೃತಿ ಅಭಿಯಾನಗಳ ಪರಿಣಾಮ ಈ ಭಾಗದ ಜನರಲ್ಲಿ ಜಾಗೃತಿ ಹೆಚ್ಚಿರುವುದು ಕಂಡು ಬರುತ್ತಿದೆ ಎಂದರು.

ರೋಗಿಗಳು ರೋಗದ ಗಂಭೀರ ಅಥವಾ ಕೊನೆಯ ಹಂತದ ಲಕ್ಷಣಗಳು ಕಾಣಿಸಿಕೊಂಡ ನಂತರವಷ್ಟೇ ವೈದ್ಯಕೀಯ ನೆರವು ಪಡೆಯುತ್ತಾರೆ, ಇದರಿಂದ ಆರಂಭಿಕ ಹಂತದಲ್ಲಿಯೇ ತಡೆಗಟ್ಟುವಿಕೆ ಮತ್ತು ಉತ್ತಮ ಚಿಕಿತ್ಸೆ ಪಡೆಯುವ ಸುವರ್ಣಾವಕಾಶವನ್ನು ಜನರು ಕಳೆದುಕೊಳ್ಳುತ್ತಾರೆ. ಸಮೀಕ್ಷೆಯಲ್ಲಿ ಕೆಲವು ಉತ್ಸಾಹಕರ ಬೆಳವಣಿಗೆಗಳೂ ಕಂಡು ಬಂದಿದ್ದು, ಹಲವರು ಸ್ವಯಂ ಪರೀಕ್ಷೆ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಹೊಂದಿದ್ದಾರೆ ಎಂದರು.

ಡೈಜಿವರ್ಲ್ಡ್ ಮೀಡಿಯಾ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಡಾ. ಜಲಾಲುದ್ದೀನ್ ಅಕ್ಬರ್, ಡಾ, ವೆಂಟರಮಣ ಕಿಣಿ, ರೋಷನ್ ಗಟ್ಟಿ ಇದ್ದರು.


ಕರಾವಳಿ ಕರ್ನಾಟಕದ ಕ್ಯಾನ್ಸರ್ ರೋಗಿಗಳಿಗೆ ಸಮಗ್ರ ಚಿಕಿತ್ಸೆ: ಡಾ. ಸುರೇಶ್ ರಾವ್

ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ವಿಶೇಷವಾಗಿ ಆರ್ಥಿಕ ನೆರವು ಮತ್ತು ಜಾಗೃತಿ ಉಪಕ್ರಮಗಳ ಮೂಲಕ ಕರಾವಳಿ ಕರ್ನಾಟಕದ ಕ್ಯಾನ್ಸರ್ ರೋಗಿಗಳನ್ನು ಬೆಂಬಲಿಸಲು ಮೀಸಲಾಗಿರುವ ಲಾಭರಹಿತ ಸಂಸ್ಥೆ. ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ ಜತೆಗೆ ನಿಕಟ ಸಂಬಂಧ ಹೊಂದಿರುವ ಈ ಟ್ರಸ್ಟ್, ಕ್ಯಾನ್ಸರ್ ಚಿಕಿತ್ಸೆಯ ಆರ್ಥಿಕ ಹೊರೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಸಹಾಯ ಮಾಡುವತ್ತ ಗಮನ ಹರಿಸಿದೆ. ಕರಾವಳಿ ಕರ್ನಾಟಕದ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ ಆಗಿದ್ದು 2011ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆ ಮಾಡಲಾಗಿದೆ. ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಸುಧಾರಿತ ತಂತ್ರಜ್ಞಾನ ಮತ್ತು ಆಂಕೋಲಜಿ ತಜ್ಞರ ತಂಡದೊಂದಿಗೆ 120 ಹಾಸಿಗೆಗಳ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆದಿದ್ದು, ವಿಶ್ವದರ್ಜೆಯ, ಕೈಗೆಟುಕುವ ಆರೈಕೆಯನ್ನು ಹಾಗೂ ಸಮಗ್ರ ಆಂಕೋಲಜಿ ಸೇವೆಗಳನ್ನು ನೀಡುತ್ತಿದೆ ಎಂದು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ ನಿರ್ದೇಶಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ, ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ನಿರ್ದೇಶಕ ಡಾ. ಸುರೇಶ್ ರಾವ್ ತಿಳಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *