ದಿಶಾಗೆ ವಾಣಿಜ್ಯ ವಿಭಾಗದಲ್ಲಿ ರ‍್ಯಾಂಕ್, 3 ಲಕ್ಷ ನಗದು ಪುರಸ್ಕಾರ, ಉಚಿತ ಶಿಕ್ಷಣ ಯೋಜನೆ ಅಡಿ ಸಿಎ ವ್ಯಾಸಂಗಕ್ಕೆ ನೆರವು: ಡಾ.ಎಂ. ಮೋಹನ ಆಳ್ವ

Spread the love

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಅತ್ಯುತ್ತಮ ಸಾಧನೆ ಮಾಡಿದ್ದು, ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ 600 ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಮಂಜುನಾಥ್ ಎಸ್. 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಿಶಾ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾಳೆ. ಆಕೆಗೆ 3 ಲಕ್ಷ ನಗದು ಪುರಸ್ಕಾರವನ್ನು ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ. ಸಂಸ್ಥೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಯೋಜನೆ ಅಡಿ ಸಿ.ಎ ವ್ಯಾಸಂಗ ಮಾಡಲು ನೆರವು ನೀಡಲಾಗುವುದು ಎಂದರು.

ಈ ವರ್ಷದ ಫಲಿತಾಂಶದಲ್ಲಿ 95 ಮಂದಿ ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರ್‍ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 687 ಮಂದಿ ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದು, 1,557 ವಿದ್ಯಾರ್ಥಿಗಳು ಶೇ 90 ಕ್ಕಿಂತ ಅಧಿಕ, 1,892 ಮಂದಿ ಶೇ 85ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 285 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.

ದ್ವಿತೀಯ ಪಿ.ಯು ಅಂತಿಮ ಪರೀಕ್ಷೆ ನಡೆಯುತ್ತಿದ್ದ ಸಂದರ್ಭ ದಿಶಾ ಅವರ ತಾಯಿ ಸವಿತಾ ಮೃತಪಟ್ಟಿದ್ದರು. ತಾಯಿ ಕಳೆದುಕೊಂಡ ದುಃಖದಲ್ಲಿಯೂ ದಿಶಾ ಪರೀಕ್ಷೆ ಬರೆದು ಅತ್ಯುನ್ನತ ಸಾಧನೆ ತೋರಿದ್ದಾಳೆ ಎಂದು ಮೋಹನ್ ಆಳ್ವ ಶ್ಲಾಘಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *