ಮಂಗಳೂರು: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಸರಕಾರವು ಎಚ್. ಪಿ. ವಿ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದ್ದು, 14 ವರ್ಷ ಪೂರ್ಣಗೊಂಡು 15 ವರ್ಷ ಪೂರ್ಣವಾಗದ ಹೆಣ್ಣು ಮಕ್ಕಳಿಗೆ ಲಸಿಕೆಯನ್ನು ನೀಡಬೇಕು. ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗುವ ವೈರಸ್‍ನಿಂದ ರಕ್ಷಣೆ ನೀಡುವ ಎಚ್‍ಪಿವಿ ಲಸಿಕೆಯ ಬಗ್ಗೆ ಪೋಷಕರಿಗೆ ನಿಖರವಾದ ಮಾಹಿತಿ ನೀಡಬೇಕು. ಎಚ್‍ಪಿವಿ ಲಸಿಕೆ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು ಅವರು ಹೇಳಿದರು.
ಮಂಗಳವಾರ ಮಿನಿವಿಧಾನಸೌಧ ತಾಲೂಕು ಕಚೇರಿಯಲ್ಲಿ ನಡೆದ ಎಚ್‍ಪಿವಿ ಲಸಿಕಾ ಅಭಿಯಾನ ಕಾರ್ಯಕ್ರಮದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಚ್‍ಪಿವಿ ಲಸಿಕಾ ಅಭಿಯಾನದ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆಗಳು ಕಾರ್ಯನಿರ್ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಇದರಿಂದ ಹೆಣ್ಣು ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.
ಎಚ್‍ಪಿವಿ ಲಸಿಕಾಕರಣದ ಮಾಹಿತಿಯನ್ನು ಪೋಷಕರಿಗೆ ತಲುಪುವಂತೆ ಮಾಡಬೇಕು. ಎಲ್ಲ ಇಲಾಖೆಗಳು ಲಸಿಕಾ ಅಭಿಯಾನವನ್ನು ಸುಗಮವಾಗಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಲಸಿಕೆ ಬಗ್ಗೆ ಹಿಂಜರಿಕೆಯುಳ್ಳ ಕುಟುಂಬಗಳ ಅನುಮಾನಗಳು ಮತ್ತು ತಪ್ಪು ತಿಳವಳಿಕೆಯನ್ನು ಪರಿಹರಿಸಿ ಸಮರ್ಪಕ ಮಾಹಿತಿ ಒದಗಿಸಬೇಕು. ಎಚ್. ಪಿ. ವಿ ಲಸಿಕೆ ಹಾಕಿಸಿದರೆ ತೊಂದರೆ ಆಗಬಹುದು ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ, ಲಸಿಕೆ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜಾಗೃತಿ ಮೂಡಿಸುವ ಜತೆಗೆ ಸಕಾರಾತ್ಮಕ ಸಂದೇಶಗಳನ್ನು ನೀಡಬೇಕು ಎಂದರು.
ಸಭೆಯಲ್ಲಿ ತಾಲೂಕು ಅರೋಗ್ಯಾಧಿಕಾರಿ ಡಾ. ಸುಜಯ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.





