ಅಂಕೋಲಾ: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಕೊಲೆಗೆ ಯತ್ನಿಸಿ ಪರಾರಿ ಆಗುತ್ತಿದ್ದ ನಾಲ್ಕು ಮಂದಿ ಸಂಶಯಾಸ್ಪದ ವ್ಯಕ್ತಿಗಳನ್ನು ಮಾಜಾಳಿ ಚೆಕ್ ಪೊಸ್ಟ್ ಬಳಿ ಪೋಲಿಸರು ಕೊಲೆಗೆ ಯತ್ನಿಸಿದ ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆದಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ.
ಗೋವಾ ನೋಂದಣಿ ಇರುವ ಕಾರಿನಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಅವರಿಗೆ ತಲೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿ ಆಗಿದ್ದರು. ಬೆಳಿಗ್ಗೆ ಸಲೂನ್ ಗೆ ಹೋಗುವಾಗ ಈ ಘಟನೆ ಅಂಕೋಲಾದ ಕಣಕಣೇಶ್ವರ ದೇವಸ್ಥಾನದ ಬಳಿ ನಡೆದಿತ್ತು. ಕೊಲೆಗೆ ಯತ್ನಿಸಿದ್ದವರು ಬಿಹಾರ ಗ್ಯಾಂಗ್ ಎಂದು ತಿಳಿದು ಬಂದಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಗೋವಾ ನೋಂದಣಿಯ ಜಿಎ 05 ಡಿ 0338 ಕಾರಿನಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಪಾರಾರಿ ಆಗಲು ಯತ್ನಿಸಿದ್ದು, ಕೊಲೆಯ ಸುಪಾರಿ ಪಡೆದು ಮೂರು ದಿನಗಳಿಂದ ಅಂಕೋಲಾದ ಹೊಟೇಲ್ ವೊಂದರಲ್ಲಿ ವಾಸ ಇದ್ದರು ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ಗೋಪಾಲಕೃಷ್ಣ ನಾಯಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳ ಶೋಧ ಕಾರ್ಯಕ್ಕೆ ಅಂಕೋಲಾ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳು ಗೋವಾಕ್ಕೆ ಪರಾರಿ ಆಗುವ ವೇಳೆ, ಕಾರವಾರ ತಾಲೂಕಿನ ಮಾಜಾಳಿ ಬಳಿಯ ಕರ್ನಾಟಕ-ಗೋವಾ ಚೆಕ್ ಪೊಸ್ಟ್ ನಲ್ಲಿ ನಾಲ್ಕು ಮಂದಿ ಬಿಹಾರ ಮೂಲದ ಶಂಕಿತ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು, ತನಿಖೆ ಮುಂದುವರೆದಿದೆ.





