ಮಂಗಳೂರು: ಜಗತ್ತು ಅತ್ಯಂತ ವೇಗವಾಗಿ ರೂಪಾಂತರಗೊಳ್ಳುತ್ತಿದೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಅದೇ ವೇಗದಲ್ಲಿ ಅಭಿವೃದ್ಧಿ ನಡೆಯುತ್ತಿದೆ ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಪದ್ಮಶ್ರೀ ಪುರಸ್ಕೃತ ಎ. ಎಸ್. ಕಿರಣ್ ಕುಮಾರ್ ಅವರು ಹೇಳಿದರು.
ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯು ಇನ್ ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ಬೆಂಗಳೂರು ಮತ್ತು ಮಂಗಳೂರು ವಿಭಾಗಗಳ ಸಹಭಾಗಿತ್ವದಲ್ಲಿ ಹೊಸತಾಗಿ ಬೆಳೆಯುತ್ತಿರುವ ಸಮನ್ವಯ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕುರಿತು ಆಯೋಜಿಸಿದ್ದ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ಮಂಗಳೂರಿನ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಬುಧವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವಕುಲ ತನ್ನ ಅಸ್ತಿತ್ವಕ್ಕಾಗಿ ಹೆಚ್ಚಿನ ಸಾಧನಗಳನ್ನು ಬಳಸಿಕೊಳ್ಳುತ್ತಿದ್ದು, ವ್ಯತ್ಯಯಕಾರಿ ತಂತ್ರಜ್ಞಾನಗಳು ಅಭಿವೃದ್ಧಿಯ ಮೇಲೆ ಮಹತ್ತರ ಪರಿಣಾಮ ಬೀರುತ್ತಿವೆ ಎಂದು ಹೇಳಿದರು. ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆ ಸಾಕಷ್ಟು ಇದೆ. ಡಾ. ವಿಕ್ರಂ ಸಾರಾಭಾಯ್ ಮತ್ತು ಡಾ. ಹೋಮಿ ಭಾಭಾ ಅವರ ಸಾಧನೆಗಳನ್ನು ನಾವು ಸ್ಮರಿಸಬೇಕು ಎಂದರು.

ರಾಕೆಟ್ಗಳು ಮತ್ತು ಉಪಗ್ರಹಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಭಾರತವು ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, 2047ರ ವೇಳೆಗೆ ವಿಕಸಿತ ಭಾರತ ಗುರಿಯನ್ನು ಸಾಧಿಸುವತ್ತ ಮುನ್ನಡೆಯುತ್ತಿದೆ ಎಂದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುಗದಲ್ಲಿ ಬದಲಾವಣೆ ಅನಿವಾರ್ಯ ಆಗಿದ್ದು, ಹೊಸತನ ಮತ್ತು ಜ್ಞಾನವನ್ನು ಪರಿವರ್ತಿಸುವ ಮೂಲಕ ಮಾತ್ರ ಮಾನವ ಜೀವನವನ್ನು ಇನ್ನಷ್ಟು ಸುಧಾರಿತಗೊಳಿಸಬಹುದು. 12 ವರ್ಷಗಳಲ್ಲಿ ಡಿಜಿಟಲ್ ಮಾಧ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿವೆ. ಇಂದಿನ ದಿನಗಳಲ್ಲಿ ಬೆರಳ ತುದಿಯಲ್ಲಿ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯುವ ಸಾಮರ್ಥ್ಯ ನಮಗೆ ದೊರೆತಿದೆ ಎಂದರು.
ಡಾ. ರಾಮಕೃಷ್ಣ ಎನ್ ಹೆಗಡೆ ಅವರು ಮಾತನಾಡಿ, ಎರಡು ದಿನಗಳ ಕಾಲ ನಡೆಯಲಿರುವ ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಮೆಕಾನಿಕಲ್ ಎಂಜಿನಿಯರಿಂಗ್, ರೋಬೋಟಿಕ್ಸ್ ಹಾಗೂ ಮೂಲಭೂತ ವಿಜ್ಞಾನ ಸೇರಿದಂತೆ ಬಹುಶಾಖೀಯ ವಿಷಯವಲಯಗಳಿಗೆ ಸಂಬಂಧಿಸಿದ 509 ಸಂಶೋಧನಾ ಪ್ರಬಂಧಗಳಲ್ಲಿ ಆಯ್ಕೆ ಮಾಡಲಾದ 152 ಪ್ರಬಂಧಗಳನ್ನು ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಆಗಮಿಸಿರುವ ಉಪನ್ಯಾಸಕರು, ಸಂಶೋಧಕರು, ತಜ್ಞರು ಹಾಗೂ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ ಎಂದರು.
ಐಇಇಇ ಮಂಗಳೂರು ಉಪವಿಭಾಗದ ಅಧ್ಯಕ್ಷ ಡಾ. ವೇಣುಗೋಪಾಲ ಪಿ. ಎಸ್., ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯರಾದ ಇಶಾನ್ ರಾವ್, ಮತ್ತು ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಕುಲಸಚಿವರಾದ ಡಾ. ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವ ಡಾ. ಅಜಯ್ ಕುಮಾರ್, ಸಂಚಾಲಕರಾದ ಪ್ರೊ. ಗೌರವ್ ಪ್ರಸಾದ್ ಮತ್ತು ಶ್ರೀನಿವಾಸ್ ವಿಶ್ವವಿದ್ಯಾಲಯದ ಶ್ರೀನಾಥ್ ರಾವ್ ಕೆ. ಇದ್ದರು.
ಈ ಸಂದರ್ಭದಲ್ಲಿ,ಅಂತರರಾಷ್ಟ್ರೀಯ ಸಮ್ಮೇಳನದ ಕಾರ್ಯ ವಿವರ ಸಂಕಲನ ಪುಸ್ತಕವನ್ನು ಬಿಡುಗಡೆಗೊಳಿಸದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಬಿ. ಎಂ. ವಂದಿಸಿದರು. ಪ್ರೊ. ರೋಹನ್ ಫರ್ನಾಂಡಿಸ್ ನಿರೂಪಿಸಿದರು. ಅನಘಾ ಪ್ರಾರ್ಥಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪನ್ಯಾಸಕರು, ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಹಾಗೂ ಕೈಗಾರಿಕಾ ಕ್ಷೇತ್ರಗಳಿಂದ ಆಗಮಿಸಿದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಇದ್ದರು.





