ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಹಾಗೂ ಕ್ರೈಸ್ಟ್ (ಡೀಮ್ಡ್) ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಕ್ರಾಂತಿ ಉಂಟಾಗಲಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಬಿಸಿಎ, ಬಿಬಿಎ ಹಾಗೂ ಎಂಸಿಎ ಕೋರ್ಸ್ ಗಳನ್ನು ಶೈಕ್ಷಣಿಕ ಪಾಲುದಾರರಾಗಿ ನೀಡಲಾಗುತ್ತದೆ ಎಂದು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಸ್ಥಾಪಕ ಅಧ್ಯಕ್ಷ ಡಾ. ಮಂಜುನಾಥ ಭಂಡಾರಿ ಅವರು ಹೇಳಿದರು.
ಶನಿವಾರ ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಆವರಣದಲ್ಲಿ ಹೊಸ ಕೋರ್ಸ್ ಗಳ ಪ್ರಾರಂಭದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶೈಕ್ಷಣಿಕ ಶ್ರೇಷ್ಠತೆ, ಉದ್ಯಮ ಜೋಡಣೆ ಮತ್ತು ಸಾಂಸ್ಥಿಕ ಅಭಿವೃದ್ಧಿ ಬಲಪಡಿಸುವ ಉದ್ದೇಶದಿಂದ ಕ್ರೈಸ್ಟ್ (ಡೀಮ್ಡ್) ವಿಶ್ವವಿದ್ಯಾಲಯದ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಕ್ರೈಸ್ಟ್ ಕಾಲೇಜಿನಲ್ಲಿ ಸಿಗುವಂತಹ ಗುಣಮಟ್ಟದ ಕೋರ್ಸ್ ಗಳು ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲಭ್ಯ ಇವೆ. ಈ ಸಹಯೋಗ ಮಹತ್ವದ ಮೈಲುಗಲ್ಲು ಸೃಷ್ಟಿಸಿದೆ ಎಂದರು.
ವಿದ್ಯಾರ್ಥಿ ಶೈಕ್ಷಣಿಕ ಅಭಿವೃದ್ಧಿ ವಿಷಯದಲ್ಲಿ ಸಂಸ್ಥೆಯು ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ. ಈಗಾಗಲೇ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ ಕೋರ್ಸ್ ಗಳಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದು, ಈಗ ಬಿಬಿಎ, ಬಿಸಿಎ, ಎಂಸಿಎ ಕೋರ್ಸ್ ಗಳನ್ನು ಪರಿಚಯಿಸುತ್ತಿದೆ. ಕಲಿಕೆಯ ಜತೆಗೆ ತಾಂತ್ರಿಕ ಶಿಕ್ಷಣ ನೀಡುವುದಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದರು.
ಕ್ರೈಸ್ಟ್ (ಡೀಮ್ಡ್) ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಅನಿಲ್ ಜೋಸೆಫ್ ಪಿಂಟೊ ಅವರು ಸಂಸ್ಥೆಯ ಉತ್ತಮ ಶೈಕ್ಷಣಿಕ ಹೆಜ್ಜೆ ಗುರುತುಗಳನ್ನು ಪಿಪಿಟಿ ಮೂಲಕ ಪ್ರಸ್ತುತಪಡಿಸಿ, ಸಹ್ಯಾದ್ರಿ ಕಾಲೇಜು ಜತೆಗೆ ಒಡಂಬಡಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿರುವುದು ಒಳ್ಳೆಯ ಬೆಳವಣಿಗೆ ಆಗಿದ್ದು, ಈ ಶೈಕ್ಷಣಿಕ ಒಪ್ಪಂದವು ಶೈಕ್ಷಣಿಕ ಗುಣಮಟ್ಟದ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ನೀಡುವುದಕ್ಕೆ ಸಹಕಾರಿ ಆಗಲಿದೆ ಎಂದರು.
ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಎಸ್. ಇಂಜಗನೇರಿ ಅವರು ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಸುಧಾರಣೆಗಳ ಅನುಷ್ಠಾನಕ್ಕೆ ಸಂಸ್ಥೆಯ ಬದ್ಧತೆ ಕುರಿತು ಮಾಹಿತಿ ನೀಡಿದರು.
ಬಿಬಿಎ, ಬಿಸಿಎ ಮತ್ತು ಎಂಸಿಎ ಕಾರ್ಯಕ್ರಮಗಳ ಅಭಿವೃದ್ಧಿ ಮತ್ತು ವರ್ಧನೆಯ ಮೇಲೆ ಕೇಂದ್ರೀಕರಿಸಿದ ಸಹಯೋಗದ ಪ್ರಯಾಣದ ಆರಂಭವನ್ನು ಗುರುತಿಸುವ ಮೂಲಕ ಈ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕಲಾಯಿತು. ಫಲಿತಾಂಶ ಆಧಾರಿತ ಶಿಕ್ಷಣ, ಮಾನ್ಯತೆ ಸಿದ್ಧತೆ ಮತ್ತು ಶೈಕ್ಷಣಿಕ ಆಡಳಿತ ಅಭ್ಯಾಸಗಳ ಮೂಲಕ ಸಾಂಸ್ಥಿಕ ಗುಣಮಟ್ಟವನ್ನು ಹೆಚ್ಚಿಸುವುದರ ಜತೆಗೆ ತರಬೇತಿ, ಕಾರ್ಯಾಗಾರಗಳು ಮತ್ತು ಮಾರ್ಗದರ್ಶನದ ಮೂಲಕ ಅಧ್ಯಾಪಕರ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ. ಸಹಯೋಗಿ ಸಂಶೋಧನೆ, ವಿದ್ಯಾರ್ಥಿ ಮತ್ತು ಅಧ್ಯಾಪಕರ ವಿನಿಮಯ, ಮತ್ತು ಡಿಜಿಟಲ್ ಮೂಲಸೌಕರ್ಯ ಮತ್ತು ವರ್ಚುವಲ್ ಕಲಿಕಾ ಪರಿಸರಗಳ ಅಭಿವೃದ್ಧಿ ಸಹ ಪ್ರಮುಖ ಗಮನ ಕ್ಷೇತ್ರಗಳಾಗಿವೆ ಎಂದು ತಿಳಿಸಿದರು.
ಕ್ರೈಸ್ಟ್ (ಡೀಮ್ಡ್) ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಬ್ಯುಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಡಾ. ಶ್ರೀನಿವಾಸ್ ಕುಲಕರ್ಣಿ; ಕಂಪ್ಯೂಟರ್ ಸೈನ್ಸ್, ಸ್ಟ್ಯಾಟಿಸ್ಟಿಕ್ಸ್ ಮತ್ತು ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ವಿನಯ್ ಎಂ, ಬಿಬಿಎ ಕಾರ್ಯಕ್ರಮ ಸಂಯೋಜಕಿ ಡಾ. ಸಂಧ್ಯಾ ಡಿ ಇದ್ದರು.
ಎಂಬಿಎ ಕಾರ್ಯಕ್ರಮದ ನಿರ್ದೇಶಕಿ ಡಾ. ವಿಶಾಲ್ ಸಮರ್ಥ ಅವರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ಸುಷ್ಮಾ ವಿ ನಿರೂಪಿಸಿದರು.





