ಯೋಗೀಶ್‌ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ , ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು

ವಿನಯ ಕುಲರ್ಣಿ

ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ದೋಷಿಗಳಾದ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ಪ್ರಕರಣದಲ್ಲಿ ಆರೋಪಿಗೆ ನೆರವಾಗಲು ಸಹಕರಿಸಿ ದಾಖಲೆಗಳನ್ನು ತಿರುಚಿದ ಆರೋಪದ ಸಂಬಂಧ ಪೊಲೀಸ್​ ಅಧಿಕಾರಿ ಆಗಿರುವ 19 ನೇ ಆರೋಪಿ ಚನ್ನಕೇಶವ ಬಿ ಟಿಂಗರೀಕರ್​ ಅವರಿಗೆ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಎಲ್ಲ ಆರೋಪಿಗಳನ್ನು ದೋಷಿಗಳು ಎಂದು ಪ್ರಕಟಿಸಿದ್ದರು, ಆದರೆ ಶುಕ್ರವಾರ ಶಿಕ್ಷೆ ಪ್ರಮಾಣ ವಿಧಿಸಿದರು.

ಈ ಆದೇಶದಿಂದಾಗಿ ಶಾಸಕ ವಿನಯ್​ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೆ ಕುತ್ತು ಬಂದಂತಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡದಿದ್ದಲ್ಲಿ ವಿನಯ್​ ಕುಲಕರ್ಣಿ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಆರೋಪಿಗಳಾದ ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್‌, ಸಂದೀಪ್‌ ಸವದತ್ತಿ, ವಿನಾಯಕ್‌ ಕಟಗಿ, ಮಹಾಬಲೇಶ್ವರ್‌ ಹೊಂಗಲ್‌ ಅಲಿಯಾಸ್‌ ಮುದಕ, ಸಂತೋಷ್‌ ಸವದತ್ತಿ, ಎಂ ದಿನೇಶ್‌, ಅಶ್ವತ್‌, ಕೆ ಎಸ್‌ ಸುನೀಲ್‌, ನಜೀರ್‌ ಅಹ್ಮದ್‌, ಶಹನಾವಾಜ್, ಕೆ ನೂತನ್‌, ಸಿ ಹರ್ಷಿತ್‌, ಚಂದ್ರಶೇಖರ್‌ ಇಂಡಿ‌, ವಿಕಾಸ್‌ ಕಲಬುರಗಿ, ವಿನಯ್‌ ಕುಲಕರ್ಣಿ ಅವರು ದೋಷಿಗಳಾಗಿದ್ದು, ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂ.ಗಳ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

ಸೆಕ್ಷನ್​ 143 – ಕಾನೂನು ಬಾಹಿರ ಸಭೆ ಮಾಡಿ ಕೊಲೆ ಪಿತೂರಿ ನಡೆಸಿದ ಆರೋಪಲ್ಲಿ ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್‌, ಸಂದೀಪ್‌ ಸವದತ್ತಿ, ವಿನಾಯಕ್‌ ಕಟಗಿ, ಮಹಾಬಲೇಶ್ವರ್‌ ಹೊಂಗಲ್‌ ಅಲಿಯಾಸ್‌ ಮುದಕ, ಸಂತೋಷ್‌ ಸವದತ್ತಿ, ಎಂ ದಿನೇಶ್‌, ಅಶ್ವತ್‌, ಕೆ ಎಸ್‌ ಸುನೀಲ್‌, ನಜೀರ್‌ ಅಹ್ಮದ್‌, ಶಹನಾವಾಜ್, ಕೆ ನೂತನ್‌, ಸಿ ಹರ್ಷಿತ್‌, ಚಂದ್ರಶೇಖರ್‌ ಇಂಡಿ‌ ಮತ್ತು ವಿಕಾಸ್​ ಕಲಬುರಗಿ ಅವರಿಗೆ ಆರು ತಿಂಗಳು ಶಿಕ್ಷೆ ಮತ್ತು 2 ಸಾವಿರ ದಂಡ ವಿಧಿಸಿದೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma