ಕಾರವಾರ: ಪೊಲೀಸ್ ಸಿಬ್ಬಂದಿಗಳಲ್ಲಿ ಕರ್ತವ್ಯ ಪ್ರಜ್ಞೆ ಸದಾ ಕಾಲ ಜಾಗೃತ ಆಗಿರಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣವೇ ಸೇವೆಗೆ ಲಭ್ಯರಿರಬೇಕು ಎಂದು ಡಿಐಜಿಪಿ (ತರಬೇತಿ) ಡಿ. ದೇವರಾಜ ಅವರು ಹೇಳಿದರು.
ಶುಕ್ರವಾರ ಕಾರವಾರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 15 ನೇ ತಂಡದಲ್ಲಿ 101 ಸಶಸ್ತ್ರ ಪೊಲೀಸ್ ಕಾನ್ ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ ನಿರ್ಗಮನ ಪಥಸಂಚಲನದಲ್ಲಿ ಕವಾಯತು ಪರಿವೀಕ್ಷಣೆ ಹಾಗೂ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ತರ ಜವಾಬ್ದಾರಿ ಇಲಾಖೆಗಿದ್ದು, ಯಾವುದೇ ಸಂದರ್ಭದಲ್ಲಿ ಕರೆ ಬಂದರೂ ಕರ್ತವ್ಯಕ್ಕೆ ಹಾಜರಾಗಿ, ತುರ್ತು ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಬೇಕು. ಕರ್ತವ್ಯದಲ್ಲಿ ಯಾವುದೇ ಸಣ್ಣ ನಿರ್ಲಕ್ಷö್ಯ ತೋರಿದರೂ ಅದು ಅತ್ಯಂತ ಗಂಭೀರ ಘಟನೆ ನಡೆಯಲು ಕಾರಣ ಆಗಬಹುದು, ಆದ್ದರಿಂದ ಕರ್ತವ್ಯ ಪ್ರಜ್ಞೆ ಸದಾ ಜಾಗೃತ ಆಗಿರಬೇಕು ಎಂದರು.
ಇತ್ತೀಚಿನ ವರ್ಷಗಳಲ್ಲಿ ಇಲಾಖೆಗೆ ಹೆಚ್ಚಿನ ಸಂಖ್ಯೆಯ ಸ್ನಾತಕೋತ್ತರ ಪದವೀಧರರು, ಎಂಜಿನಿಯರ್ಗಳು, ಪದವೀಧರರು ನೇಮಕಗೊಳ್ಳುತ್ತಿದ್ದು, ನಿಮ್ಮ ಜ್ಞಾನವು ಇಲಾಖೆಗೆ ಸದ್ಬಳಕೆಯಾಗಲಿ ಎಂದ ಅವರು, ಯಾವುದೇ ಸಂದರ್ಭದಲ್ಲೂ ವೃತ್ತಿಪರತೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಹಾಗೂ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಕೃಷ್ಣಮೂರ್ತಿ ಜಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರು ಇದ್ದರು.

ತರಬೇತಿಯಲ್ಲಿ ಹೊರಾಂಗಣದಲ್ಲಿ ಉತ್ತಮ ಸಾಧನೆ ತೋರಿದ, ದೋಂಟಿರಾ ಪರ್ಸೆ, ರಂಗನಾಥ್, ಶಿವರಾಜ್ ಹಾಗೂ ಒಳಾಂಗಣದಲ್ಲಿ ಉತ್ತಮ ಸಾಧನೆ ತೋರಿದ ಮುರಳಿ, ಅನಿಲ್ ಕುಮಾರ್, ಅನ್ವರ್ಸಾಬ್ ನದಾಫ್ ಮತ್ತು ಪೈರಿಂಗ್ ನಲ್ಲಿ ಉತ್ತಮ ಸಾಧನೆ ತೋರಿದ ಶಿವಪ್ಪ ದೇವರಮನಿ, ವೀರೇಶ್ ಮಡಿವಾಳ, ದೋಂಟಿರಾ ಪರ್ಸೆ ಅವರಿಗೆ ಬಹುಮಾನ ವಿತರಿಸಲಾಯಿತು. ತರಬೇತಿಯ ಸರ್ವೋತ್ತಮ ಪ್ರಶಸ್ತಿಯನ್ನು ದೋಂಟಿರಾ ಪರ್ಸೆ ಪಡೆದರು.
ಈ ತರಬೇತಿ ಶಾಲೆಯಲ್ಲಿ ಪ್ರಸ್ತುತ 15 ನೇ ತಂಡದಲ್ಲಿ 101 ಸಶಸ್ತ್ರ ಪೊಲೀಸ್ ಕಾನ್ ಸ್ಟೆಬಲ್ ಪ್ರಶಿಕ್ಷಣಾರ್ಥಿಗಳಿಗೆ ದಿನಾಂಕ:-07-04-2025 ರಿಂದ ಬುನಾದಿ ತರಬೇತಿಯು ಪ್ರಾರಂಭವಾದ್ದು, ಇದರಲ್ಲಿ ಬೆಂಗಳೂರು ನಗರ ಕೇಂದ್ರ ಸಶಸ್ತ್ರ ಮೀಸಲು ಪಡೆಯಿಂದ 43, ಬೆಂಗಳೂರು ನಗರ ಪಶ್ಚಿಮ ಸಶಸ್ತ್ರ ಮೀಸಲು ಪಡೆಯಿಂದ 18, ಬೆಂಗಳೂರು ನಗರ ಉತ್ತರ ಸಶಸ್ತ್ರ ಮೀಸಲು ಪಡೆಯಿಂದ 3, ಬೆಂಗಳೂರು ನಗರ ದಕ್ಷಿಣ ಸಶಸ್ತ್ರ ಮೀಸಲು ಪಡೆಯಿಂದ 37 ಜನ ಪ್ರಶಿಕ್ಷಣಾರ್ಥಿಗಳಿದ್ದಾರೆ. ಈ ತಂಡದಲ್ಲಿ 5 ಜನ ಸ್ನಾತಕೋತ್ತರ ಪದವೀಧರರು, 16 ಮಂದಿ ಎಂಜಿನಿಯರಿಂಗ್ ಪದವಿ, 64 ಜನ ಇತರೇ ಪದವಿ, 4 ಜನ ವೃತ್ತಿ ಶಿಕ್ಷಣ ಹಾಗೂ 7 ಜನ ಪದವಿ ಪೂರ್ವ ಶಿಕ್ಷಣ ಪಡೆದಿದ್ದು, 19 ಪ್ರಶಿಕ್ಷಣಾರ್ಥಿಗಳು ಮಾಜಿ ಸೈನಿಕರಾಗಿರುತ್ತಾರೆ.
ಪ್ರಶಿಕ್ಷಣಾರ್ಥಿಗಳಿಗೆ ಒಳಾಂಗಣ ಹಾಗೂ ಹೊರಾಂಗಣ ವಿಷಯದಲ್ಲಿ ತರಬೇತಿಯನ್ನು ಪ್ರತ್ಯೇಕವಾಗಿ ನೀಡಲಾಗಿದ್ದು, ಒಳಾಂಗಣ ತರಬೇತಿಯಲ್ಲಿ ಪ್ರಚಲಿತ ಮಹತ್ವದ ವಿಷಯಗಳೊಂದಿಗೆ 3 ಹೊಸ ಕಾನೂನುಗಳ ಅಧಿನಿಯಮಗಳು, ಪೋಲೀಸ್ ಕೈಪಿಡಿ (ಪೊಲೀಸ್ ಮ್ಯಾನ್ಯುಯಲ್), 19 ವಿವಿಧ ಸ್ಥಳೀಯ ಮತ್ತು ವಿಶೇಷ ಕಾನೂನುಗಳು ಹಾಗೂ ಮಾನಸಿಕ ಆರೋಗ್ಯ, ಒತ್ತಡ ನಿವಾರಣೆ, ನಾಗರಿಕ ರಕ್ಷಣೆ, ವಿಪತ್ತು ನಿರ್ವಹಣೆ, ಗಣಕಯಂತ್ರ ಪ್ರಾಯೋಗಿಕ ತರಬೇತಿ ಮುಂತಾದವುಗಳ ಬಗ್ಗೆ ಅತಿಥಿ ಉಪನ್ಯಾಸಕರಿಂದ ಹಾಗೂ ಪೊಲೀಸ್ ಅಧಿಕಾರಿಗಳಿಂದ ಬೋಧನೆ ನೀಡಲಾಗಿರುತ್ತದೆ.
ಹೊರಾಂಗಣ ವಿಷಯದಲ್ಲಿ ಪಿ.ಟಿ, ಕವಾಯತು, ಲಾಠಿ, ಟಿಯರ್ಗ್ಯಾಸ್, ದೊಂಬಿ ನಿಯಂತ್ರಣ ಕಾರ್ಯಾಚರಣೆ, ಫೀಲ್ಡ್ಕ್ರಾಫ್ಟ್, ಸೆರಮೋನಿಯಲ್ ಪರೇಡ್, ಅಡೆತಡೆ ಓಟ, ಯು.ಎ.ಸಿ., ಕರಾಟೆ, ಯೋಗ, ಸ್ಫೋಟಕ ವಸ್ತುಗಳ ಪತ್ತೆ ಹಾಗೂ ತಕ್ಷಣಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ, ಡಿ.ಎಫ್.ಎಂ.ಡಿ. ಮತ್ತು ಎಚ್. ಎಚ್.ಎಂ.ಡಿ. ಉಪಯೋಗಿಸುವ ಬಗ್ಗೆ, ಶಸ್ತ್ರ ತರಬೇತಿಯಲ್ಲಿ ಎಸ್.ಎಲ್.ಆರ್. ಎ.ಕೆ-47,9 ಎಂ.ಎ. ಮಷಿನ್ ಗನ್, ಎಲ್.ಎಂ.ಜಿ. ಇನ್ಸಾಸ್, ಎಕ್ಸ್ ಕ್ಯಾಲಿಬರ್ ರೈಫಲ್, ಗ್ಯಾಸ್ ಗನ್, ಶೆಲ್ ಮತ್ತು ಗ್ರೇನೆಡ್ ಮುಂತಾದ ಶಸ್ತ್ರಾಗಳ ಉಪಯೋಗ ಹಾಗೂ ನಿರ್ವಹಣೆಗಳ ಬಗ್ಗೆ ಸಂಪೂರ್ಣ ತರಬೇತಿ ಹಾಗೂ 112 ಮತ್ತು ಹೈವೇ ಪೆಟ್ರೋಲಿಂಗ್ ವಾಹನಗಳ ಕಾರ್ಯವಿಧಾನದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.





