ಮಂಗಳೂರು ವಿವಿ 44ನೇ ಘಟಿಕೋತ್ಸವ ಇಂದು: ಹಾಜಬ್ಬ, ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್

Spread the love

ಮಂಗಳೂರು: ಇದೇ 28 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ವಿವಿ 44 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಬಾರಿ ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಈಚೆಗೆ ನಿಧನರಾದ ಯಕ್ಷಗಾನ ರಂಗದ ದಶಾವತಾರಿ, ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಪಾಲ ಹಾಗೂ ವಿವಿವಿ ಕುಲಾಧಿಪತಿ ಥಾವರ್ ಚಂದ್ ಗೆಹಲೋತ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್ಲ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಹಾಗೂ ವಿವಿ ಸಹಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 162 (ಕಲಾ -40, ವಿಜ್ಞಾನ ಮತ್ತು ತಂತ್ರಜ್ಞಾನ -92. ವಾಣಿಜ್ಯ – 25, ಶಿಕ್ಷಣ – 05) ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಇವರಲ್ಲಿ 74 ಮಹಿಳೆಯರು ಮತ್ತು 88 ಪುರುಷರು ಹಾಗೂ 11 (ಪುರುಷ-10, ಮಹಿಳೆ-01) ಅಂತರ ರಾಷ್ಟ್ರೀಯ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ ಎಂದರು.

56 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಒಟ್ಟು 147 ರ‍್ಯಾಂಕ್ ಗಳಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ 69 (ಸ್ನಾತಕೋತ್ತರ ಪದವಿ- 50 ಮತ್ತು ಪದವಿ-19) ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದರಲ್ಲಿ ಕಲಾ ವಿಭಾಗದ -17, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ -40, ವಾಣಿಜ್ಯ ವಿಭಾಗದ 8, ಶಿಕ್ಷಣ ವಿಭಾಗದ 4 ವಿದ್ಯಾರ್ಥಿಗಳಿದ್ದಾರೆ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ, ಗಣೇಶ್ ಸಂಜೀವ ,ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *