ಕಾರವಾರ: ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಮತ್ತು ಆಹಾರ ಪದ್ದತಿಯಿಂದ ಕ್ಯಾನ್ಸರ್ ಹೆಚ್ಚಾಗಿದ್ದು, ಇದನ್ನು ಗುಣಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ ಹಾಗೂ ಡೀನ್ ಡಾ. ಪೂರ್ಣಿಮಾ .ಆರ್. ಟಿ ಅವರು ಹೇಳಿದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಬೆಂಗಳೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉತ್ತರ ಕನ್ನಡ ಜಿಲ್ಲಾ ಶಾಖೆ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಹಾಗೂ ತಪಾಸಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ಗುಣಲಕ್ಷಣಗಳಾದ ಗಂಟು, ನೋವು, ಗಾಯ, ಊತ, ಹುಣ್ಣು ಇರುವುದು ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ಸಮಾಲೋಚನೆ ಪಡೆದು ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆದುಕೊಂಡರೆ ಕೆಲವು ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದಾಗಿದ್ದು, ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಕ್ಯಾನ್ಸರ್ ಕಾಯಿಲೆಯ ಗುಣಲಕ್ಷಣಗಳ ಕುರಿತು ಜನರಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸಬೇಕು ಇದರಿಂದ ತಮ್ಮ ಕುಟುಂಬ ಮತ್ತು ಸುತ್ತ ಮುತ್ತಲಿನ ಜನರು ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ ಹಾಗೂ ಸಮಾಜದಲ್ಲಿನ ಕ್ಯಾನ್ಸರ್ ಸವಾಲನ್ನು ಸುಲಭವಾಗಿ ಎದುರಿಸಬಹುದು ಎಂದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ನರೇಶ ಪಾವಸ್ಕರ್ ಅವರು ಮಾತನಾಡಿ, ಧೂಮಪಾನ, ಮದ್ಯಪಾನದಂತಹ ಚಟುಚಟಿಕೆಗಳ ಪರಿಣಾಮಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಬರುವ ಸಾಧ್ಯತೆಯಿದೆ. ಇಂತಹ ವ್ಯಸನಗಳಿಂದ ದೂರ ಉಳಿಯಬೇಕು. ಕ್ಯಾನ್ಸರ್ ಬಂದರೆ ಸಂಪೂರ್ಣವಾಗಿ ಗುಣಪಡಿಸುವುದು ಅಸಾಧ್ಯ ಆದರೆ ದೇಹದಲ್ಲಿ ವೈರಾಣುಗಳು ಹರಡುವ ಆರಂಭದ ಹಂತದಲೇ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಗುಣಮುಖರಾಗಬಹುದು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉತ್ತರ ಕನ್ನಡ ಜಿಲ್ಲಾ ಶಾಖೆಯ ಸಭಾಪತಿ ವಿ.ಎಂ. ಹೆಗಡೆ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿ, ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಾವುಗಳು ಮನೆ ಮನೆಗೆ ತೆರಳಿ ಜನರಲ್ಲಿ ಕ್ಯಾನ್ಸರ್ ಗುಣಲಕ್ಷಣಗಳ ಕುರಿತಂತೆ ಅರಿವು ಮೂಡಿಸಬೇಕು ಎಂದರು.
ಕ್ಯಾನ್ಸರ್ ಕಾಯಿಲೆ ಕುರಿತು ಡಾ. ಅಣ್ಣಪ್ಪ ಶೆಟ್ಟಿ ಹಾಗೂ ಡಾ. ಅನುರಾಧ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಆರ್‌ಸಿಹೆಚ್ ಅಧಿಕಾರಿ ನಟರಾಜ.ಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉ.ಕ ಶಾಖೆಯ ಉಪಸಭಾಪತಿ ನಜೀರ ಅಹಮ್ಮದ ಯು. ಶೇಖ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಶಾಖೆ ಬೆಂಗಳೂರಿನ ಆಡಳಿತ ಮಂಡಳಿಯ ಸದಸ್ಯ ಸದಾನಂದ ಎಂ. ನಾಯ್ಕ, ಭಾರತೀಯ ರೇಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಎಸ್, ಬರ‍್ಕೋಡಿಕರ, ಆರೋಗ್ಯ ಸಮಿತಿ ಮುಖ್ಯಸ್ಥ ಡಾ. ಹೇಮಗಿರಿ ಕೆ., ಖಜಾಂಜಿ ರಾಮಾ ಎನ್. ನಾಯ್ಕ. ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜು ಉಪನ್ಯಾಸಕರು, ವಿದ್ಯಾಥಿಗಳು ಕ್ರಿಮ್ಸ್ನ ಅಧಿಕಾರಿ ಸಿಬ್ಬಂದಿ ಇದ್ದರು.





