ಎಂಸಿಸಿ ಬ್ಯಾಂಕ್ ಗೆ ದಾಖಲೆಯ 13 ಕೋಟಿ ಲಾಭ, 25 ನೇ ಸಿಲ್ವರ್ ಶಾಖೆ ಮಂಗಳೂರಿನಲ್ಲಿ: ಅಧ್ಯಕ್ಷ ಅನಿಲ್ ಲೋಬೊ

Spread the love

ಮಂಗಳೂರು: ಎಂಸಿಸಿ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಬ್ಯಾಂಕ್ ಈ ಆರ್ಥಿಕ ವರ್ಷದಲ್ಲಿ ರೂಪಾಯಿ 13 ಕೋಟಿ ಲಾಭ ದಾಖಲಿಸಿದ್ದು, ನಿವ್ವಳ ಎನ್‌ಪಿಎ ಇಳಿಕೆಗೆ ನಿರಂತರ ಪ್ರಯತ್ನ ನಡೆಸಿ, ಶೇ 1.25 ಮಟ್ಟಕ್ಕೆ ತಗ್ಗಿಸಲು ಯಶಸ್ವಿ ಆಗಿದೆ. ಒಟ್ಟು ವ್ಯವಹಾರ ರೂಪಾಯಿ 1525 ಕೋಟಿಗೆ ತಲುಪಿದ್ದು ದಾಖಲೆಯನ್ನು ಸಾಧಿಸಿದೆ. ಮಾರ್ಚ್ ಅಂತ್ಯದೊಳಗೆ ಮಂಗಳೂರಿನಲ್ಲಿ ಸಿಲ್ವರ್ ಶಾಖೆ (25ನೇ ಶಾಖೆ) ಆರಂಭ ಮಾಡಲಾಗುತ್ತದೆ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2018 ರಲ್ಲಿ ಬ್ಯಾಂಕ್ ಚುಕ್ಕಾಣಿ ಹಿಡಿದ ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ರೂಪಾಯಿ 500 ಕೋಟಿ ಇದ್ದ, ಬ್ಯಾಂಕಿನ ಒಟ್ಟು ವ್ಯವಹಾರವು ಕಳೆದ ಏಳೂವರೆ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದು 114 ವರ್ಷದ ಇತಿಹಾಸವಿರುವ ಬ್ಯಾಂಕ್ ಆಗಿದ್ದು, ಬ್ಯಾಂಕ್ ನೆಟ್‌ವರ್ತ್ ರೂಪಾಯಿ 83.76 ಕೋಟಿಯಿಂದ ರೂ.91.80 ಕೋಟಿಗೆ ಏರಿಕೆ ಕಂಡಿದೆ ಎಂದರು.

ಬ್ಯಾಂಕ್ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಠೇವಣಿಗಳು ಹಾಗೂ ಸಾಲಗಳ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಿದೆ. ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.285 ಕೋಟಿಗಳ ಒಟ್ಟು ವ್ಯವಹಾರ ವಹಿವಾಟನ್ನು ದಾಖಲಿಸಿದ್ದು, ಇದು ಬ್ಯಾಂಕ್ ದೃಢವಾದ ಸಾಧನೆ, ಸ್ಥಿರ ಬೆಳವಣಿಗೆ ಹಾಗೂ ಪರಿಣಾಮಕಾರಿ ವ್ಯವಹಾರ ತಂತ್ರಗಳನ್ನು ಪ್ರತಿಬಿಂಬಿಸುತ್ತದೆ. ಎನ್‌ಆರ್‌ಐ ಗ್ರಾಹಕರ ನಿರಂತರ ಬೆಂಬಲವು ಬ್ಯಾಂಕ್ ಅಭಿವೃದ್ದಿಗೆ ಕಾರಣ ಆಗಿದೆ ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಎಂಬ ಕರಾವಳಿ ಜಿಲ್ಲೆಗಳಲ್ಲೇ ಸೇವೆ ನೀಡುತ್ತಿದ್ದ ಬ್ಯಾಂಕ್, ಇದೀಗ ರಾಜ್ಯದಾದ್ಯಂತ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬೈಂದೂರಿನಲ್ಲಿ 20 ನೇ ಶಾಖೆ ಹಾಗೂ ಸಂತೆಕಟ್ಟೆಯಲ್ಲಿ 21ನೇ ಶಾಖೆ ಆರಂಭಿಸಿದೆ. ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸುಸಜ್ಜಿತ ಸೌಲಭ್ಯದೊಂದಿಗೆ ಸ್ಥಳಾಂತರಿಸಲಾಗಿದೆ. ಬೆಳ್ಮಣ್, ಸುರತ್ಕಲ್, ಉಡುಪಿ, ಬೆಳ್ತಂಗಡಿ, ಸಂತೆಕಟ್ಟೆ, ಕಿನ್ನಿಗೋಳಿ ಹಾಗೂ ಕುಲಶೇಖರದಲ್ಲಿ ಹೊಸ 7 ಏಟಿಎಂಗಳನ್ನು ಸ್ಥಾಪಿಸಲಾಗಿದೆ. ಹೀಗೆ
ಎಟಿಎಂಗಳ ಸಂಖ್ಯೆ 15ಕ್ಕೆ ಏರಿದೆ ಎಂದರು.

2026-27ನೇ ವರ್ಷದಲ್ಲಿ 4 ಹೊಸ ಶಾಖೆ ಆರಂಭಿಸಲು ಯೋಜನೆ ಹಾಕಲಾಗಿದ್ದು, ಶಾಖೆಗಳ ಸಂಖ್ಯೆಗಳು 25 ಕ್ಕೆ ಏರಲಿವೆ. ಈಗಾಗಲೇ 22 ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಮತ್ತು 23ನೇ ಶಾಖೆಯನ್ನು ಕಟಪಾಡಿಯಲ್ಲಿ ಆರಂಭಿಸಲು ಅನುಮತಿ ಸಿಕ್ಕಿದೆ. ಕರ್ನಾಟಕದಲ್ಲಿ ಎನ್‌ಆರ್‌ಐ ಸೌಲಭ್ಯವನ್ನು ಹೊಂದಿರುವ ಎರಡನೇ ನಗರ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದು, ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸಮಾನವಾದ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ. ರಾಜ್ಯದಾದ್ಯಂತ ಶಾಖೆಗಳ ವಿಸ್ತರಣೆಯತ್ತವೂ ಗಮನ ಹರಿಸಿದೆ. 2025–26 ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.13 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿದ್ದು, ರೂ. 872.88 ಕೋಟಿ ಠೇವಣಿಗಳನ್ನು ಹೊಂದಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಶೇ 23.74 ಏರಿಕೆ ಕಂಡಿದೆ. ರೂ.652.06 ಕೋಟಿ ಸಾಲ ನೀಡಿದ್ದು, ಶೇ 21.79 ವೃದ್ಧಿ ಸಾಧಿಸಿದೆ. ದುಡಿಯುವ ಬಂಡವಾಳ ರೂ.1008.97 ಕೋಟಿ ಮತ್ತು ಷೇರು ಬಂಡವಾಳ ರೂ.34.08 ಕೋಟಿ ಆಗಿದೆ. ಒಟ್ಟು ಎನ್‌ಪಿಎ ಪ್ರೊವಿಷನ್ ಕವರೆಜ್ ಅನುಪಾತ ಶೇ 68.87 ಆಗಿದೆ. ಬ್ಯಾಂಕಿನ ಸಿಆರ್‌ಎಆರ್ ಮಾರ್ಚ್ ಅಂತ್ಯಕ್ಕೆ ಶೇ 17 ಆಗಿದ್ದು, ನಿಗದಿಪಡಿಸಿದ ಶೇ 12 ಮಾನದಂಡಕ್ಕಿಂತ ಹೆಚ್ಚಾಗಿದೆ ಎಂದರು.

ಜೂನ್ ಅಂತ್ಯದೊಳಗೆ ದೇರಳಕಟ್ಟೆಯಲ್ಲಿ 22 ನೇ ಶಾಖೆ ಆರಂಭ, ಮಂಗಳೂರು (ಮೋರ್ಗನ್‌ಗೇಟ್) ಶಾಖೆಯನ್ನು ಜುಲೈ ಅಂತ್ಯದೊಳಗೆ ಸ್ಥಳಾಂತರ, ಅಗಸ್ಟ್ ಮೊದಲ ವಾರದಲ್ಲಿ ಕಟಪಾಡಿ (ಉಡುಪಿ ಜಿಲ್ಲೆ) ಯಲ್ಲಿ 23 ನೇ ಶಾಖೆ ಆರಂಭ, ಕಾರ್ಕಳ ಶಾಖೆಯನ್ನು ಅಗಸ್ಟ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ, ಮೂಡುಬಿದಿರೆ ಶಾಖೆಯನ್ನು ಅಗಸ್ಟ್ ಅಂತ್ಯದೊಳಗೆ ನೆಲ ಮಹಡಿಗೆ ಸ್ಥಳಾಂತರ, ಮಾರ್ಚ್ ಅಂತ್ಯದೊಳಗೆ ವಾಮಂಜೂರಿನಲ್ಲಿ 24 ನೇ ಶಾಖೆ ಆರಂಭ ಮಾಡಲಾಗುತ್ತದೆ ಎಂದರು.

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ – ಆಂಡ್ರೂ ಡಿಸೊಜಾ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಷನ್ ಡಿಸೋಜ್, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ್ , ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂಧಕ ಸುನಿಲ್ ಮಿನೇಜಸ್ ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *