ಮಂಗಳೂರು: ಭರತನಾಟ್ಯವು ದೇಹ ಮನಸ್ಸು ಮತ್ತು ಆತ್ಮದ ಸಮ್ಮಿಲನ ಆಗಿದ್ದು, ಮನುಷ್ಯನನ್ನು ದೈವಿಕ ಸಾಕ್ಷಾತ್ಕಾರದತ್ತ ಕೊಂಡೊಯ್ಯಬಲ್ಲ ಸರ್ವಶ್ರೇಷ್ಠ ಕಲೆ ಎಂದು ಜಗದ್ಗುರು ಎಡನೀರು ಮಠದ ಸಚ್ಚಿದಾನಂದ ಭಾರತಿ ಶ್ರೀಗಳು ಹೇಳಿದರು.
ಅವರು ಮಂಗಳೂರಿನ ಭರತಾಂಜಲಿ ನೃತ್ಯ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ 30ರ ಸಂಭ್ರಮ ಕಿಂಕಿಣಿ ತ್ರಿಂಶತ್ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವದಿಸಿದರು.
30 ವರ್ಷಗಳಿಂದ ಸಮಾಜಮುಖಿ ಚಿಂತನೆಗಳೊಂದಿಗೆ ಕಲಾ ಸೇವೆಯನ್ನು ಮಾಡುತ್ತಿರುವ ಭಾರತಾಂಜಲಿಯ ರೂವಾರಿಗಳಾದ ಹಾಗೂ ಮಠದ ಶಿಷ್ಯರಾದ ಶ್ರೀಧರ ಹೊಳ್ಳ ಪ್ರತಿಮಾ ದಂಪತಿ ಅಭಿನಂದನಾರ್ಹರು ಎಂದರು.
ಮುಖ್ಯ ಅತಿಥಿ ಜಿಲ್ಲಾಧ್ಯಾರ್ಮಿಕ ಪರಿಷತ್ ಸದಸ್ಯ ಶಿಬರೂರಿನ ಸುಬ್ರಮಣ್ಯ ಪ್ರಸಾದ್ ಕೋರ್ಯಾರ್ ಮಾತನಾಡಿ, ಭರತನಾಟ್ಯವು ಕ್ರಿಯಾತ್ಮಕ ರೋಮಾಂಚಕ ಜೀವಂತ ಸಂಪ್ರದಾಯ ಆಗಿದ್ದು, ಕಲಾವಿದರಿಗೆ ಸೃಜನಶೀಲ ಪರಿಶೋಧನೆಗಳಿಗೆ ಅನಂತ ವ್ಯಾಪ್ತಿಯನ್ನು ನೀಡಲು ಸಹಕಾರಿ ಎಂದರು.
ಗುರುಗಳಾದ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಮಾತನಾಡಿ, ಕಲೆಯ ಚೌಕಟ್ಟಿನೊಳಗೆ ಪ್ರಚಾರ ಪ್ರಸಾರ ಮಾಡುತ್ತಿರುವ ತನ್ನ ಶಿಷ್ಯರಾದ ಹೊಳ್ಳ ದಂಪತಿಗೆ ಸದಾ ಆಶೀರ್ವಾದವಿದೆ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಶುಭ ಹಾರೈಸಿದರು. ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸುಖವಾಣಿ ಶೆಟ್ಟಿ ಹಾಗೂ ರಕ್ಷಣಾ ಸಚಿವರಿಂದ ಡಿಫೆನ್ಸ್ ಮಿನಿಸ್ಟರ್ ಕಮಾಂಡೇಷನ್ ಅವಾರ್ಡ್ ಪಡೆದ ನಿಶಾ ಡಿ ಸುವರ್ಣ ಅವರನ್ನು ಗೌರವಿಸಲಾಯಿತು.
ಭರತಾಂಜಲಿಯ ನಿರ್ದೇಶಕ ಗುರು ಶ್ರೀಧರ ಹೊಳ್ಳ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ನೃತ್ಯ ಗುರು- ಪ್ರತಿಮಾ ಶ್ರೀಧರ್ ವಂದಿಸಿದರು. ಶ್ರೀನಿಧಿ ಶೆಟ್ಟಿ ನಿರೂಪಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಸೇರಿ ಗುರುನಮನ ಸಲ್ಲಿಸಿದರು. ಭರತಾಂಜಲಿಯ ಹಿರಿಯ ವಿದ್ಯಾರ್ಥಿಗಳಿಂದ ಸ್ವಾತಿ ತಿರುನಾಳ್ ವಿರಚಿತ ಶ್ರೀ ರಾಮಾಯಣಂ ನೃತ್ಯ ಪ್ರಸ್ತುತಿ ಹಾಗೂ ಬೆಂಗಳೂರಿನ ವಿದುಷಿ ಗೌರಿ ಸಾಗರ್ ಅವರಿಂದ ಹಾಸ್ಯಾಧಾರಿತ ನೃತ್ಯ ಪ್ರದರ್ಶನ ವಿನೋದ ಪ್ರೇಕ್ಷಕರ ಕರತಾಡನದೊಂದಿಗೆ ಸುಂದರವಾಗಿ ಮೂಡಿಬಂತು.





