ಮಂಗಳೂರು: ಮಹಾನಗರ ಪಾಲಿಕೆ, ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಸೇರಿದಂತೆ ಮೆಸ್ಕಾಂ ಕೇಬಲ್ ಅಳವಡಿಕೆ 300 ಕೋಟಿ ರೂಪಾಯಿ ಕಾಮಗಾರಿಗೆ ಸರಕಾರ ಮಂಜೂರಾತಿ ನೀಡಿದ್ದು, ಯೋಜನೆ ಶೀಘ್ರವೇ ಕಾರ್ಯಾನುಷ್ಠಾನಗೊಳ್ಳಲಿದೆ ಎಂದು ಸ್ಪೀಕರ್ ಯು. ಟಿ. ಖಾದರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿ 186 ಕೋಟಿ ರೂಪಾಯಿ, 45 ಲಕ್ಷ ರೂಪಾಯಿ ವೆಚ್ಚದಲ್ಲಿ ಮೆಸ್ಕಾಂ ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಇದರ ಜತೆಗೆ ಪ್ರವಾಸೋದ್ಯ ಹಾಗೂ ಧಾರ್ಮಿಕ ಕ್ಷೇತ್ರ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಮೆಸ್ಕಾಂ ಕೇಬಲ್ ಅಳವಡಿಕೆ ಕಾಮಗಾರಿ ಯೋಜನೆ ಕಾರ್ಯ ನಡೆಯಲಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುದ್ರೋಳಿ, ಬಿಜೈ, ಕೆಎಸ್ ಆರ್ ಟಿಸಿ, ಊರ್ವಸ್ಟೋರ್ ಮಹಾಗಣಪತಿ ದೇವಸ್ಥಾನದ ರಥಬೀದಿಯನ್ನು ಒಳಗೊಂಡಂತೆ 67 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಬಲ್ ಅಳವಡಿಕೆಗೆ ಟೆಂಡರ್ ಕಾರ್ಯವು ಮುಗಿದಿದೆ. ವಿಮಾನ ನಿಲ್ದಾಣ ಕಾವೂರು ರಸ್ತೆಯಲ್ಲಿ ಭೂಗತ ಕೇಬಲ್ ಅಳವಡಿಕೆಗೆ 57 ಕೋಟಿ ಮಂಜೂರಿ ಆಗಿದೆ ಎಂದರು.
ಉಳ್ಳಾಲದ 32 ಕೆ.ವಿ. ಪವರ್ ಸ್ಟೇಶನ್ ಅನ್ನು 110 ಕೆ.ವಿ. ಮೇಲ್ದರ್ಜೆಗೆ ಏರಿಸಲಾಗಿದೆ. ಅದೇ ರೀತಿ ಕೋಣಾಜೆಯಲ್ಲಿ ಇರುವ 10 ಕೆ.ವಿಯಿಂದ 20 ಕೆ.ವಿ ಗೆ ಹಾಗೂ ಹೊಸದಾಗಿ 20 ಕೆ.ವಿ.ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಉಳ್ಳಾಲದ ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ಪ್ರಸ್ತಾವ ಸಲ್ಲಿಸಲಾಗಿದೆ. ಕಡಲ್ ಕೊರೆತದಿಂದ ಹಾನಿಯಾದ ಪ್ರದೇಶದಲ್ಲಿ ಅಪೂರ್ಣ ಗೊಂಡಿದ್ದ ಕಾಮಗಾರಿ ಪೂರ್ಣ ಗೊಳಿಸಲಾಗಿದೆ ಎಂದರು.
ಎಸಿಪಿ ಕಚೇರಿಗೆ ನೂತನ ಜಾಗ ಕಟ್ಟಡ ಮಂಜೂರಾಗಿದೆ. 20 ಕೋಟಿ ರೂಪಾಯಿ ವೆಚ್ಚದಲ್ಲಿ ಎಸಿಪಿ ಕಚೇರಿ, ಸಂಚಾರ ಠಾಣೆಯ ಕಚೇರಿ ಹಾಗೂ ಎಐ ಸೈಬರ್ ಸೆಂಟರ್ ಒಂದೇ ಕಡೆ ನಿರ್ಮಾಣ ಆಗಲಿದೆ. ನಗರದ ಸೌಂದರ್ಯ ಹೆಚ್ಚಿಸಲು, ಮನೆಯ ಪರಿಸರದಲ್ಲಿ ನೇತಾಡುವ ವಿದ್ಯುತ್ ತಂತಿ ಸಮಸ್ಯೆಗಳಿಂದ ಪರಾಗಬಹುದು. ಇದು ಒಂದೂವರೆ ಮೀಟರ್ ಆಳದಲ್ಲಿ ಕೇಬಲ್ ಅಳವಡಿಸಲಾಗುತ್ತದೆ. 25 ವರ್ಷಗಳ ಕಾಲ ಇದು ಸಮರ್ಪಕವಾಗಿ ಕಾರ್ಯ ನಿರ್ವಹಿಸು ವ ಸಾಮರ್ಥ್ಯ ಹೊಂದಿದೆ ಎಂದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಇದ್ದರು.





