ಮೂಡುಬಿದಿರೆ: ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನಕ್ಕೆ ನಟ ಶಿವರಾಜ್ ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ‘ಏನನ್ನೇ ಸಾಧಿಸ ಬೇಕಾದರೂ ಮನಸ್ಸಿನಲ್ಲಿ ಧಾರಾಳತನಬೇಕು. ಅದನ್ನು ನಾನಿಲ್ಲಿ ಕಂಡಿದ್ದೇನೆ. ಆಳ್ವರಿಗೆ ಧನ್ಯವಾದ. ಎಲ್ಲರನ್ನೂ ಒಳಗೊಳ್ಳುವುದೇ ಕನ್ನಡ- ಕರ್ನಾಟಕದ ಸಂಸ್ಕೃತಿ. ಇಡೀ ಭಾರತದ ವಿಭಿನ್ನ ಸಂಸ್ಕೃತಿ ಒಂದುಗೂಡಿರುವುದನ್ನು ನಾನು ಇಲ್ಲಿ ಕಂಡಿದ್ದೇನೆ. ನೀವೆಲ್ಲ ಹೀಗೆಯೇ ಮುಂದೆಯೂ ಜೊತೆಯಾಗಿ ಜೀವಿಸಿ. ಎಲ್ಲರೂ ಒಂದಾಗಿ ಬದುಕಿ ಸಾಧಿಸಿ’ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಮೂಡುಬಿದಿರೆಗೆ ನಾನು ಎರಡನೇ ಬಾರಿಗೆ ಬರುತ್ತಿದ್ದೇನೆ. ಸ್ಮೈಲ್ ಸಿನಿಮಾಕ್ಕಾಗಿ ಬಂದಿದ್ದೆವು. ಈಗ ತುಂಬಾ ಖುಷಿ ಆಯಿತು. 40 ವರ್ಷಗಳ ಬಳಿಕವೂ ನನ್ನ ಮೇಲೆ ಅದೇ ಪ್ರೀತಿ ತೋರುತ್ತಿದ್ದೀರಲ್ಲಾ. ನಾನೇ ಪುಣ್ಯವಂತ’ ಎಂದರು. ಇದೇ ವೇಳೆ ಅವರು ಟುವ್ವಿ ಟುವ್ವಿ ಟುವ್ವಿ,…, ಮುತ್ತಣ ಪೀಪಿ ಊದುವ…,ಮಣಿ ಮಣಿ…, ಇವನಾರ ಮಗನೋ…, ಬೇಡುವನು ವರವನ್ನು ಜೋಗಿ…, ಯಾರೇ ಕೂಗಾಡಲಿ…, ಬೊಂಬೆ ಹೇಳುತೈತೆ… ಹಾಡುಗಳನ್ನು ಹಾಡಿ ಕುಣಿದರು.

ನಾವು ಬಾರದಿದ್ದರೆ ತಪ್ಪಾಗುತ್ತಿತ್ತು. ಎಲ್ಲ ಸಂಸ್ಕೃತಿ ಒಂದೆಡೆ ನೋಡುವುದು ಪುಣ್ಯ’ ಎಂದೇ ಮಾತು ಆರಂಭಿಸಿದ ಗೀತಾ ಶಿವರಾಜ್ ಕುಮಾರ್, ಆಳ್ವಾಸ್ ಹುಡುಗಿಯರನ್ನು ನೋಡುವಾಗಲೇ ಒಂದು ಆಕರ್ಷಣೆ ಆಗುತ್ತದೆ. ಇಂತಹ ಸಂಸ್ಥೆ ಕಟ್ಟಿದ ಆಳ್ವಾಸ್ ಗೆ ಧನ್ಯವಾದ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರಿಗೆ, ‘ ನಿಮ್ಮ ಮಾತು’ ಎಂದು ಶಿವರಾಜ್ ಕುಮಾರ್ ಕೇಳಿದಾಗ, ‘ಇಂದು ನಿಮ್ಮ, ವಿದ್ಯಾರ್ಥಿಗಳ ದಿನ’ ಎಂದು ಕೈ ಸನ್ನೆ ಮಾಡಿದರು. ಸಂಘಟನಾ ಶಿಸ್ತಿಗೆ ಅವರು ‘ಭೇಷ್’ ಎಂದರು.
ವಿದ್ಯಾರ್ಥಿ ಕೌಶಿಕ್ ಬರೆದ ಚಿತ್ರವನ್ನು ದಂಪತಿಗೆ ನೀಡಲಾಯಿತು. ದಿನದ ಸ್ಪರ್ಧೆಗಳ ನಿರ್ಣಾಯಕರಾಗಿ ಬಂದ ಚಿತ್ರರಂಗದ ಪ್ರಮುಖರಾದ ನಟ ರಾಹುಲ್ ಅಮೀನ್, ಶೈಲಶ್ರೀ ಮೂಲ್ಕಿ, ದಿಶಾ ಶೆಟ್ಟಿ ಹಾಗೂ ಸಾಹಿಲ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರುಗಳು ಇದ್ದರು. ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.
ಕಲಾ ಪ್ರದರ್ಶನ: ಮಹಾರಾಷ್ಟ್ರ, ಗುಜರಾತ್, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದರು.
ಸಾಂಸ್ಕೃತಿಕ ಕಲಾಕೃತಿಗಳಿಂದ ಸಿಂಗರಿಸಲ್ಪಟ್ಟ ಆವರಣದಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟ ವಿದ್ಯಾರ್ಥಿಗಳೇ ಪ್ರಮುಖ ಆಕರ್ಷಣೆ ಆಗಿದ್ದರು.
ಸ್ವಾದದ ಘಮಲು: ಅಷ್ಟು ಮಾತ್ರವಲ್ಲ, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಗುಜುರಾತ್ ಮತ್ತು ದೇಶದ ವಿವಿಧ ಭಾಗಗಳ ಆಹಾರ ಸವಿಯುವ ಸದಾವಕಾಶವು ವಿದ್ಯಾರ್ಥಿಗಳಿಗೆ ದೊರೆಯಿತು. ಕೇರಳ ಶೈಲಿಯ ಕಪ್ಪಾ ಮತ್ತು ಮೀನು ಸಾರು, ಇಡಿಯಪ್ಪಂ, ಪರಂಪುರಿ, ಕಟ್ಟನ್ ಚಾಯ, ಮಲಬಾರ ಬಿರಿಯಾನಿ, ತುಳುನಾಡಿನ ಕೋರಿ ರೂಟ್ಟಿ, ಕೋಳಿ ಸುಕ್ಕ, ಮೀನು ಪುಳಿಮುಂಚಿ, ಮೂಡೆ, ಗುಂಡ, ಹೋಳಿಗೆ ರಸಾಯನ, ಈಶಾನ್ಯ ಭಾರತದ ಪೈಕಿ ವಿಶೇಷವಾಗಿ ಮಣಿಪುರಿಯ ಸಿಂಗ್ಜು, ಕೆಲಿಚ್ಚನ್, ಇಮ್ಲಿ ಜ್ಯೂಸ್, ಮ್ಯಾಮೋಸ್, ಇತರ ಭಾರತದ ಹೈದರಾಬಾದ್ ಬಿರಿಯಾನಿ, ಮೊಹಬತ್ ಕಿ ಶರಬತ್, ಚೋಲೆ ಭತುರೆ – ಆಮ್ ರಾಸ್, ಕಚೋರಿ, ಮೊಮೊಸ್ ಮಹಾರಾಷ್ಟ್ರ ಮತ್ತು ಗುಜರಾತಿನ ಪಾನಿಪುರಿ, ಸೇವ್ ಪುರಿ, ಮಸಾಲಾ ಪುರಿ, ದಹಿ ಕಚೋರಿ ಮತ್ತಿತರ ಆಹಾರ ಖಾದ್ಯಗಳು ಬಾಯಿ ನೀರೂರಿಸಿದವು.





