ಸಿಲಿಕಾನ್ ಬೀಚ್ ಪ್ರೋಗ್ರಾಂ ವತಿಯಿಂದ ಆರಂಭಿಸಲಾದ ಬೇಸ್ ಕ್ಯಾಂಪ್‌ಗೆ ಶಾಸಕ ಭರತ್ ಶೆಟ್ಟಿ ಚಾಲನೆ

WhatsApp Image 2026 04 18 at 7.04.38 PM1

ಮಂಗಳೂರು: ಹೊರ ದೇಶಗಳು ಹಾಗೂ ರಾಜ್ಯಗಳಿಂದ ಮಂಗಳೂರಿನಲ್ಲಿ ಐಟಿ ಉದ್ಯಮ ಸ್ಥಾಪಿಸಲು ಸಿಲಿಕಾನ್ ಬೀಚ್ ಪ್ರೋಗ್ರಾಂ ಬೇಸ್ ಕ್ಯಾಂಪ್ ಇಂದಿನ ತುರ್ತು ಅಗತ್ಯ ಆಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಕರಾವಳಿ ಕರ್ನಾಟಕದಲ್ಲಿ ನ್ಯಾನೋ ಜಿಸಿಸಿ ಹಾಗೂ ಉಪ ಕಚೇರಿಗಳನ್ನು ಸ್ಥಾಪಿಸಲು ಮುಂದಾಗುವ ಬಹುರಾಷ್ಟ್ರೀಯ, ದೇಶೀಯ ಹಾಗೂ ರಾಜ್ಯದ ಕಂಪನಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೊಟ್ಟಾರದ ವರ್ಕ್‌ವರ್ಕ್ ಟ್ರಯಾಂಗಲ್‌ನಲ್ಲಿ ಶನಿವಾರ ಸಿಲಿಕಾನ್ ಬೀಚ್ ಪ್ರೋಗ್ರಾಂ ವತಿಯಿಂದ ಆರಂಭಿಸಲಾದ ಬೇಸ್ ಕ್ಯಾಂಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

1801 WhatsApp Image 2026 04 18 at 7.04.36 PM

ನಗರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಹಾಗೂ ಸಿದ್ಧಾಂತಗಳನ್ನು ಬದಿಗೊತ್ತಿ ಎಲ್ಲರೂ ಕೈಜೋಡಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸಿಲಿಕಾನ್ ಬೀಚ್ ಪ್ರೋಗ್ರಾಂ ಸಂಸ್ಥೆ ಮಂಗಳೂರಿನಲ್ಲಿ ಐಟಿ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗುವ ಕಂಪೆನಿಗಳಿಗೆ ಅಗತ್ಯ ಸೌಲಭ್ಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಒದಗಿಸಲು ಮುಂದಾಗಿದೆ. ಇದು ಮಂಗಳೂರಿನಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣ ಆಗಲಿದೆ ಎಂದರು.

ಶಿಕ್ಷಣ ಹಬ್ ಆಗಿರುವ ಮಂಗಳೂರು ಆರೋಗ್ಯ ಹಾಗೂ ಮೂಲ ಸೌಕರ್ಯಗಳ ಹಬ್ ಕೂಡ ಆಗಿದೆ. ಮರಳಿ ಊರಿಗೆ ಅಭಿಯಾನದ ಮೂಲಕ ಈಗಾಗಲೇ ವಿದೇಶಗಳಲ್ಲಿ ಸ್ಟಾರ್ಟ್‌ಅಪ್‌ಗಳು ಹಾಗೂ ಉದ್ಯಮಗಳನ್ನು ಹೊಂದಿರುವವರು ಮಂಗಳೂರಿಗೆ ಮರಳಲು ಬಯಸುತ್ತಿದ್ದಾರೆ. ಅಂತಹವರಿಗೆ ಈ ಬೇಸ್ ಕ್ಯಾಂಪ್ ಸಹಕಾರಿ ಆಗಲಿದೆ ಎಂದರು.

ಬೇಸ್ ಕ್ಯಾಂಪ್‌ನ ಪ್ರಯೋಜನದಿಂದ ಈಗಾಗಲೇ ಉದ್ಯಮವನ್ನು ಆರಂಭಿಸಿರುವ ಅಮೆರಿಕ ಮೂಲದ ವಿನಾಯಲ್ ಸಂಸ್ಥೆಯ ನಿರ್ದೇಶಕ ನಾಗರಾಜ್ ಆಚಾರ್ಯ ಹಾಗೂ ಎಂತ್ರಪಿ ಸಂಸ್ಥೆಯ ನಿರ್ದೇಶಕ ವಿಶಾಲ್ ಅವರು ತಮ್ಮ ಅನುಭವ ಹಂಚಿಕೊಂಡರು.

ಪ್ರಾಸ್ತಾವಿಕ ಮಾತನಾಡಿದ ಸಿಲಿಕಾನ್ ಬೀಚ್ ಪ್ರೋಗ್ರಾಂ ಸಂಚಾಲಕ ರೋಹಿತ್ ಭಟ್, ಎರಡು ವರ್ಷಗಳಲ್ಲಿ ಕರಾವಳಿಯಲ್ಲಿ 40 ಕ್ಕೂ ಅಧಿಕ ಹೊಸ ಐಟಿ ಕಂಪನಿಗಳು ಆರಂಭಗೊಂಡಿದ್ದು, 8000 ಉದ್ಯೋಗಗಳು ಸೃಷ್ಟಿ ಆಗಿವೆ. ಮಂಗಳೂರನ್ನು ಜಾಗತಿಕ ಐಟಿ ನಕ್ಷೆಯಲ್ಲಿ ಪ್ರಮುಖ ಸ್ಥಾನಕ್ಕೆ ತರುವ ಉದ್ದೇಶದಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಅನನ್ಯಾ ಲಕ್ಷ್ಮಿ ಬೆನನ್ ನಿರೂಪಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma