ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರ ಅನ್ನು ರಾಜ್ಯದ 2 ನೇ ಬೆಂಗಳೂರು ನಗರದ ರೀತಿ ಅಭಿವೃದ್ಧಿ ಮಾಡಲು ಸರಕಾರ ಬದ್ಧ. ನಗರದ ಅಭಿವೃದ್ಧಿಗೆ 165 ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. 100 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಯೋನಿಕ್ಸ್ ಮೂಲಕ ಐ.ಟಿ ಪಾರ್ಕ್ ರೂಪಿಸಲು ಯೋಜನೆ ಸಿದ್ಧ ಆಗಿದೆ, ವೆನ್ಲಾಕ್ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯ ಬದಲಾಗಿ ಪ್ರಾದೇಶಿಕ ದರ್ಜೆಯ ಆಸ್ಪತ್ರೆಯನ್ನಾಗಿ ಮಾಡುವುದಕ್ಕೆ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಶನಿವಾರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿ, ವೆನ್ಲಾಕ್ ನಲ್ಲಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ಒಪಿಡಿ ಬ್ಲಾಕ್ ನಿರ್ಮಾಣ ಆಗಲಿದೆ. ಕುದ್ಮಲ್ ರಂಗರಾವ್ ಸ್ಮಾರಕ ಅಭಿವೃದ್ಧಿ, ಅಂಬೇಡ್ಕರ್ ವೃತ್ತದ ಅಭಿವೃದ್ಧಿ ಸೇರಿದಂತೆ ಮಂಗಳೂರು ನಗರದಸ ಎಲ್ಲಾ ರೀತಿಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರಾವಳಿ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ನದಿ ಪ್ರದೇಶದ ಅಭಿವೃದ್ಧಿಗೆ ಅತಿಕ್ರಮಣ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸರಕಾರದ ಹಣವೆಂದರೆ ಜನರ ಹಣ. ಈ ವಿಚಾರದಲ್ಲಿ ಸಣ್ಣತನ ಬೇಡ. ರಾಜ್ಯ, ಕೇಂದ್ರದ ಅನುದಾನ ಎನ್ನಬಾರದು. ಒಳ ಚರಂಡಿಗೆ ಇನ್ನೂ ಅನುದಾನದ ಅಗತ್ಯ ಇದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವರ ಸಹಕಾರ ಬೇಕು ಎಂದರು.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮಾತನಾಡಿ, ರಾಜ್ಯದಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಮೂಲಕ ನಗರಾಭಿವೃದ್ಧಿ ಯೋಜನೆಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 2600 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಂತ 2 ರ ಮೂಲಕ ಜಿಎಸ್ ಟಿ ಸೇರಿ ಮಂಗಳೂರು ಮಹಾನಗರ ಪಾಲಿಕೆಗೆ 25 ಕಾಮಗಾರಿಗಳಿಗೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳಿದರು.
ರಾಜ್ಯದಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳಿಗೆ ರಾಜ್ಯ ಸರಕಾರ 24 ಸಾವಿರ ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ. ದೇಶದಲ್ಲಿ ಅತ್ಯಂತ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳ ಪೈಕಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯ ಸೇರಿದೆ. ಈ ಪೈಕಿ ಶೇ 10 ರಿಂದ ಶೇ 12 ಮೊತ್ತವನ್ನು ಮಾತ್ರ ರಾಜ್ಯ ಹಿಂಪಡೆಯುತ್ತಿದೆ ಎಂದರು.

ರಾಜ್ಯದ 13 ಮಹಾನಗರ ಪಾಲಿಕೆಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದೇವೆ, ಪಕ್ಷಾತೀತವಾಗಿ, ಜಾತ್ಯತೀತವಾಗಿ ರಾಜ್ಯ ಸರಕಾರ ಕಾರ್ಯನಿರ್ವಹಿಸುತ್ತಿದೆ. ಮಂಗಳೂರು ನಗರದ ಒಳಚರಂಡಿ ನಿರ್ಮಾಣಕ್ಕೆ 40 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ನಗರದ ಒಳಚರಂಡಿ ನಿರ್ಮಾಣಕ್ಕೆ 1000 ಕೋಟಿ ರೂ. ಅನುದಾನ ನೀಡುವಂತೆ ಆಗ್ರಹಿಸಿದರು. ಹಿಂದಿನ ಅವಧಿಯಲ್ಲಿ ತಡೆಹಿಡಿಯಲಾದ ಕಾಮಗಾರಿಗಳನ್ನು ಮುಂದುವರೆಸುವಂತೆ ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ , ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಪರಿಸರ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶ್ಯಾಲೆಟ್ ಪಿಂಟೊ, ರಾಜ್ಯ ಬೀಜ ನಿಗಮದ ಅಧ್ಯಕ್ಷೆ ಲಾವಣ್ಯಾ ಬಲ್ಲಾಳ್, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ದಾಸ್, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಆಯುಕ್ತ ರವಿಚಂದ್ರ ನಾಯಕ್, ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಮನಪಾ ಮಾಜಿ ಸದಸ್ಯ ರಾದ ಅಪ್ಪಿ, ಲ್ಯಾನ್ಸಿ ಲೋಟ್ ಪಿಂಟೋ, ಅನಿಲ್, ಪ್ರಕಾಶ್ ಸಾಲ್ಯಾನ್ ಇದ್ದರು.
ಎನ್ ಜಿಟಿ ಪರಿಹಾರ ನಿಧಿ ಕಾಮಗಾರಿ ಶಿಲಾನ್ಯಾಸ
ಮಹಾತ್ಮ ಗಾಂಧಿ ನಗರಾಭಿವೃದ್ಧಿ ಯೋಜನೆ (ಹಂತ-2) ಮತ್ತು ಎನ್ ಜಿಟಿ ಪರಿಹಾರ ನಿಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭದ ಅಂಗವಾಗಿ ಮರವೂರು -ಮರಕಡ ವರೆಗಿನ ಚತುಷ್ಪಥ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗೆ 9 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದೆ. ವೆಲೆನ್ಸಿಯಾ ವೃತ್ತದ ಬಳಿ ವೆಲೆನ್ಸಿಯಾ -ನಾಗನಕಟ್ಟೆ ರಸ್ತೆ ಕಾಂಕ್ರಿಟ್, ಸೇರಿದಂತೆ 3.47 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಕೂಡ ಶಿಲಾನ್ಯಾಸ ನೆರವೇರಿಸಲಾಗಿದೆ. ಸುಸಜ್ಜಿತ ರಸ್ತೆ ಕಾಮಗಾರಿ ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.





