ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಹುತೇಕ ಹೊಟೇಲ್ ಗಳಲ್ಲಿ ತಿಂಡಿಯ ಮೆನು ಬದಲಾವಣೆ ಆಗುತ್ತಿದ್ದು, ಗ್ರಾಹಕರ ಕೇಳಿದ ತಿಂಡಿ ತಿನಿಸು ನೀಡುವುದಕ್ಕೆ ಹೊಟೇಲ್ ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಗ್ಯಾಸ್ ಸಿಲಿಂಡರ್ ಕೊರತೆ ಹೆಚ್ಚಾಗುತ್ತಿರುವುದರ ಪರಿಣಾಮ ಯುದ್ಧ ಎಫೆಕ್ಟ್ ಜಿಲ್ಲೆಯ ಹೊಟೇಲ್ ಉದ್ಯಮಕ್ಕೆ ದೊಡ್ಡ ಆಘಾತವನ್ನೇ ನೀಡುತ್ತಿದೆ. ಸಕಾಲದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗದೇ ಇರುವ ಕಾರಣಕ್ಕೆ ಬಹುತೇಕ ಹೊಟೇಲ್ ಗಳು ಬಾಗಿಲು ಬಂದ್ ಮಾಡಿರುವುದು ಹೊಟೇಲ್ ತಿಂಡಿ ನೆಚ್ಚಿಕೊಂಡವರಿಗೆ ಆಘಾತ ಉಂಟಾಗಿದೆ.
ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಕೂಡ ಸಾಕಷ್ಟು ಬದಲಾವಣೆ ಆಗಿದ್ದು, 30 ದಿನಕ್ಕೆ ಒಂದು ಸಿಲಿಂಡರ್ ನೀಡಲಾಗುತ್ತಿದೆ. ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಸ್ಥಗಿತವಾಗಿದೆ. ಆದರೂ, ಕೂಡ ಕೆಲ ಏಜೆನ್ಸಿಗಳು ಗ್ಯಾಸ್ ಪೂರೈಕೆ ಮಾಡುತ್ತಿದ್ದರಿಂದ ಕೆಲ ಹೊಟೇಲ್ ಗಳನ್ನು ಇಲ್ಲಿಯವರಿಗೆ ನಡೆಸಿಕೊಂಡು ಬರಲಾಯಿತು. ಆದರೆ, ಈಗ ಗ್ಯಾಸ್ ತುರ್ತು ಸಮಸ್ಯೆ ಉಂಟಾಗಿದ್ದರಿಂದ ಬಹುತೇಕ ಹೊಟೇಲ್‌ಗಳು ನಿಧಾನವಾಗಿ ಬಂದ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಪರಿಸ್ಥಿತಿ ಇನ್ನಷ್ಟು ಹೀಗೆ ಮುಂದುವರೆದರೆ ಜಿಲ್ಲೆಯ ಹೊಟೇಲ್ ಉದ್ಯಮಕ್ಕೆ ಸಂಕಷ್ಟ ಖಚಿತ ಎಂದು ಹೇಳಲಾಗುತ್ತದೆ.
ಸಣ್ಣ ಹೊಟೇಲ್, ಕ್ಯಾಂಟಿನ್ ಗಳು ಬಂದ್ ಆಗಿವೆ. ಇದೀಗ ವಾಣಿಜ್ಯ ಸಿಲಿಂಡರ್ ಮುಗ್ಗಟ್ಟು ಜಾಸ್ತಿ ಆಗಿದ್ದರಿಂದ ಮತ್ತಷ್ಟು ಹೊಟೇಲ್‌ಗಳು ಬಾಗಿಲು ಬಂದ್ ಆಗುತ್ತಿವೆ. ಬೆಳಿಗ್ಗೆ ಬಾಗಿಲ ತೆರೆದ ಹೊಟೇಲ್ ಗಳು ಮಧ್ಯಾಹ್ನ, ಸಂಜೆಯ ವೇಳೆಗೆ ಬಾಗಿಲು ಮುಚ್ಚುತ್ತಿವೆ. ಪರಿಣಾಮ ಗ್ರಾಹಕರು ಊಟ-ತಿಂಡಿಗೆ ಅಬ್ಬರದ ಬಿಸಿಲಿನಲ್ಲಿ ಅಲೆದಾಡುವುದು ಸಾಮಾನ್ಯ ಆಗಿ ಬಿಟ್ಟಿದೆ.
ಗ್ಯಾಸ್ ಹೆಚ್ಚು ಬಳಕೆ ಆಗುವ ಕಾರಣದಿಂದ ನಗರದ ಕೆಲ ಹೊಟೇಲ್‌ಗಳಲ್ಲಿ ದೋಸೆ, ಇಡ್ಲಿ, ವಡೆ ಮಾಡುತ್ತಿಲ್ಲ, ದೋಸೆ ಬೇಕು ಎಂದು ಯಾವುದೇ ಹೊಟೇಲ್ ಗಳಲ್ಲಿ ಸಿಗ್ತಾ ಇಲ್ಲ. ಉಪ್ಪಿಟ್ಟು -ಅವಲಕ್ಕಿ, ಕಡ್ಲೆ-ಅವಲಜ್ಜಿ, ಹೆಸರು ಬೇಳೆ, ಪುಲಾವ್, ಕೇಸರಿ ಬಾತ್, ಪುಳಿಯೊಗರೆ, ಗೋಳಿಬಜೆ ಸಹಿತ ಕೆಲವು ಸಾಂಪ್ರದಾಯಿಕ ತಿಂಡಿ ತಿನಸು ನೀಡಲಾಗುತ್ತಿದೆ. ಊಟದ ವೇಳೆ ಚಪಾತಿ ನೀಡಲಾಗುತ್ತಿಲ್ಲ. ಅನ್ನದಲ್ಲಿ ಕುಚಲಕ್ಕಿ ಅಕ್ಕಿ ಬದಲಾಗಿ ಬಿಳಿ ಅಕ್ಕಿಯ ಅನ್ನಕ್ಕೆ ಆದ್ಯತೆ ನೀಡಲಾಗಿದೆ. ನಾನ್ ವೆಜ್ ಹೊಟೇಲ್ ಗಳಲ್ಲಿ ಕೂಡ ಮೆನು ಸಾಕಷ್ಟು ಬದಲಾಗಿದೆ. ದೊಡ್ಡ ದೊಡ್ಡ ಹೊಟೇಲ್ ಗಳಲ್ಲಿ ಪರಿಸ್ಥಿತಿ ತುಂಬಾ ಬದಲಾಗಿದೆ. ಬಾಗಿಲು ಬಂದ್ ಮಾಡಿದರೇ ಎಲ್ಲಿ ಸಮಸ್ಯೆ ಆಗುತ್ತೋ ಎನ್ನುವ ಕಾರಣಕ್ಕೆ ಇನ್ನೂ ಕೂಡ ಕೆಲ ಹೊಟೇಲ್ ಗಳಲ್ಲಿ ಊಟ– ಉಪಾಹಾರ ಸಿಗ್ತಾ ಇದೆ.
ನಗರದಲ್ಲಿ ಇರುವ 300 ಕ್ಕೂ ಪೇಯಿಂಗ್ ಗೆಸ್ಟ್ ಹಾಗೂ 50 ಕ್ಕೂ ಅಧಿಕ ಹಾಸ್ಟೆಲ್‌ಗಳಿಗೆ ಗ್ಯಾಸ್ ಸಮಸ್ಯೆ ಎದುರಾಗಿದ್ದು, ಹಾಸ್ಟೆಲ್ ಗಳಲ್ಲಿ ಜಾಗ ಇರುವವರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವುದಕ್ಕೆ ಸಿದ್ದವಾಗಿದ್ದಾರೆ. ಇನ್ನು ಕೆಲ ಕಡೆಗೆ ಊಟ- ಉಪಾಹಾರ ಹೊಂದಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ವಾತಾವರಣ ಕಂಡು ಬರುತ್ತಿದೆ.
ಜಿಲ್ಲೆಯ ನೂರಾರು ಕ್ಯಾಟರಿಂಗ್ ಗಳು ಗ್ಯಾಸ್ ಸಮಸ್ಯೆ ಎದುರಿಸುತ್ತಿದ್ದು, ಸಭಾಂಗಣದಲ್ಲಿ ಕೆಲವು ತಿಂಡಿತಿನಿಸುಗಳನ್ನು ಲೈವ್ ಆಗಿ ತಯಾರಿಸುವ ಕ್ಯಾಟರಿಂಗ್ ಸಂಸ್ಥೆಗಳು ಇದೀಗ ಲೈವ್ ಫುಡ್ ತಯಾರಿಯಿಂದ ದೂರ ಉಳಿಯುವ ಚಿಂತನೆಗೆ ಬಂದಿವೆ ಎಂದು ಕ್ಯಾಟರಿಂಗ್ ಮಾಲೀಕರೊಬ್ಬರು ತಿಳಿಸಿದರು.
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದ್ದು, ಸಮಸ್ಯೆ ಹೀಗೆ ಮುಂದುವರೆದರೆ ಹೊಟೇಲ್ ವ್ಯವಹಾರ ಬಂದ್ ಮಾಡಲಾಗುತ್ತದೆ. ಹೊಟೇಲ್‌ಗಳನ್ನು ನಂಬಿ ಬದುಕು ಸಾಗಿಸುವ ಸಪ್ಲಾಯರ್, ಅಡುಗೆಯವರು, ಕ್ಲೀನರ್ ಸಹಿತ ಇತರ ಕಾರ್ಮಿಕರು ಮತ್ತವರ ಕುಟುಂಬಸ್ಥರೂ ಕೂಡ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೊಟೇಲ್ ಮಾಲೀಕರೊಬ್ಬರು ಅಳಲು ತೊಡಿಕೊಂಡರು.
ಗ್ರಾಹಕ ಬಳಕೆಯ ಸಿಲಿಂಡರ್ ಪೂರೈಕೆ ಅವಧಿ 30 ದಿನಕ್ಕೆ ಹೆಚ್ಚಳ: ನಾಗರಾಜ
ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಆಗಿದ್ದು, ಗ್ಯಾಸ್ ಕಂಪನಿಗಳ ಜತೆಗೆ ಜಿಲ್ಲಾಡಳಿತ ಮಾತುಕತೆ ನಡೆಸುತ್ತಿದೆ. ಜತೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕೂಡ ಈ ಬಗ್ಗೆ ಪ್ರಯತ್ನ ನಡೆಸುತ್ತಿದೆ. ಹೊಟೇಲ್ ಗಳ ಅಗತ್ಯಕ್ಕೇ ಬೇಕಾದಷ್ಟು ಗ್ಯಾಸ್ ಸಿಗುತ್ತಿಲ್ಲ, ಇನ್ನು ಗ್ರಾಹಕ ಬಳಕೆಯ ಪೂರೈಕೆ ಮಾಡುವ ಅವಧಿಯನ್ನು ಕೂಡ ಹೆಚ್ಚಿಸಲಾಗಿದೆ. 25 ದಿನಗಳಿಗೆ ಬದಲಾಗಿ 30 ದಿನಕ್ಕೆ ಹೆಚ್ಚಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಗ್ರಾಹಕ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ನಾಗರಾಜ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಿಗೆ ಗ್ಯಾಸ್ ಸಮಸ್ಯೆ ಇಲ್ಲ
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಸದ್ಯ ಯಾವುದೇ ರೀತಿಯಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಆಗಿಲ್ಲ. ಮೆಟ್ರಿಕ್ ಪೂರ್ವ ಹಾಸ್ಟೆಲ್ ಗಳಿಗೆ ರಜೆ ಇರುವ ಕಾರಣದಿಂದ ಸಮಸ್ಯೆ ಇಲ್ಲ, ಇನ್ನು ಮೆಟ್ರಿಕ್ ನಂತರದ ಹಾಸ್ಟೆಲ್ ಗಳಿಗೆ ಅಗತ್ಯಕ್ಕೆ ತಕ್ಕಷ್ಟು ಸಿಲಿಂಡರ್ ಸಿಗುತ್ತಿದೆ. ಯಾವುದೇ ರೀತಿಯ ಸಮಸ್ಯೆ ಆಗಿಲ್ಲ. ಜಿಲ್ಲಾಡಳಿತದಿಂದ ಕೂಡ ಹಾಸ್ಟೆಲ್ ಗಳಿಗೆ ಅಗತ್ಯಕ್ಕೆ ಬೇಕಾದಷ್ಟು ಸಿಲಿಂಡರ್ ಪೂರೈಕೆ ಆಗುತ್ತಿದೆ ಎಂದು ದ.ಕ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಹೇಮಲತಾ ತಿಳಿಸಿದರು.





