ದ.ಕ ಜಿಲ್ಲೆಯಲ್ಲಿ ಅಮಿಬಾ ಸೋಂಕಿನಿಂದ ಸಾವು ಸಂಭವಿಸಿಲ್ಲ: ಡಿಎಚ್ ಒ ಡಾ. ತಿಮ್ಮಯ್ಯ ಸ್ಪಷ್ಟನೆ

Spread the love

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಅಮಿಬಾ ಸೋಂಕಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಜನರು ಯಾವುದೇ ರೀತಿಯ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಮಿಬಾ ಈ ಸೋಂಕಿನಿಂದ ಮೃತಪಟ್ಟಿರುವ ಕುರಿತಂತೆ ಮಾಧ್ಯಮದಲ್ಲಿ ವರದಿ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಯಾವುದೇ ಸೋಂಕು ವರದಿ ಆಗಿಲ್ಲ. ಜಿಲ್ಲೆಯಲ್ಲಿ ಕೆಲವು ಮಾದರಿಗಳಲ್ಲಿ ಪ್ರಸ್ತುತ ಪತ್ತೆ ಆಗಿರುವ ಜೀವಿಗಳು ಇತರ ರೋಗಗಳಿಗೆ ಸಂಬಂಧಿಸಿದ ಚಲನಶೀಲ ಬ್ಯಾಕ್ಟೀರಿಯಾಗಳಾಗಿವೆ ಎಂದು ತಿಳಿಸಿದ್ದಾರೆ.

ಅಮೀಬಿಕ್ ಮೆನಿಂಜೈಟಿಸ್ ಮೆದುಳು ತಿನ್ನುವ ಅಮಿಬಾದಿಂದ ಉಂಟಾಗುವ ಅಪರೂಪದ, ಆದರೆ, ಅತ್ಯಂತ ಗಂಭೀರ ಮೆದುಳಿನ ಸೋಂಕು. ಈ ಅಮಿಬಾ ಸಾಮಾನ್ಯವಾಗಿ ಬೆಚ್ಚಗಿನ ಸಿಹಿ ನೀರಿನ ಮೂಲಗಳಾದ ಕೊಳ, ಕೆರೆ, ಕಾಲುವೆ, ನಿಂತ ನೀರು ಮತ್ತು ಸರಿಯಾಗಿ ನಿರ್ವಹಿಸದ ಈಜುಕೊಳಗಳಲ್ಲಿ ಕಂಡು ಬರುತ್ತದೆ. ಸ್ನಾನ, ಈಜು, ಧುಮುಕುವುದು ಅಥವಾ ನೀರಿನಲ್ಲಿ ಆಡುವಾಗ ಕಲುಷಿತ ನೀರು ಮೂಗಿನ ಮೂಲಕ ದೇಹ ಸೇರಿದಾಗ ಸೋಂಕು ಉಂಟಾಗುತ್ತದೆ. ನಂತರ ಅಮಿಬಾ ಮೆದುಳಿಗೆ ತಲುಪಿ ತೀವ್ರ ಸೋಂಕು ಉಂಟು ಮಾಡಬಹುದು ಎಂದು ತಿಳಿಸಿದ್ದಾರೆ.

ಈ ಸೋಂಕು ಕಲುಷಿತ ನೀರು ಕುಡಿಯುವುದರಿಂದ ಹರಡುವುದಿಲ್ಲ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಮೂಗಿನ ಶಸ್ತ್ರಚಿಕಿತ್ಸೆಯ ಇತಿಹಾಸವಿರುವ ಅಥವಾ ಮೂಗಿನ ವಿಕೃತಿಗಳಿರುವ ವ್ಯಕ್ತಿಗಳು ನೀರಿನ ಸಂಪರ್ಕಕ್ಕೆ ಬರುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದೆ. ತೀವ್ರ ತಲೆನೋವು, ಜ್ವರ, ವಾಂತಿ, ಕುತ್ತಿಗೆ ಬಿಗಿತ, ಪ್ರಜ್ಞೆಯಲ್ಲಿ ಬದಲಾವಣೆ ಅಥವಾ ಗೊಂದಲ, ಪ್ರಜ್ಞೆ ತಪ್ಪುವುದು, ಸೆಳವು ರೋಗದ ಲಕ್ಷಣಗಳಾಗಿವೆ. ಸೋಂಕಿಗೆ ಒಳಗಾದ 1 ರಿಂದ 12 ದಿನಗಳ ಒಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ವೇಗವಾಗಿ ಉಲ್ಬಣಗೊಳ್ಳಬಹುದು ಎಂದು ತಿಳಿಸಿದ್ದಾರೆ.

ನಿಂತ ನೀರಿನ ಅಥವಾ ಬೆಚ್ಚಗಿನ ಸಿಹಿ ನೀರಿನ ಕೊಳ, ಕೆರೆ ಮತ್ತು ಕಾಲುವೆಗಳಲ್ಲಿ ಸ್ನಾನ ಅಥವಾ ಈಜುವುದು, ಧುಮುಕುವುದು ಅಥವಾ ಜಿಗಿಯುವುದನ್ನು ತಪ್ಪಿಸಿ, ಈಜುವಾಗ ಮೂಗಿನ ಕ್ಲಿಪ್‌ಗಳನ್ನು ಬಳಸಿ ಮೂಗಿಗೆ ನೀರು ಹೋಗದಂತೆ ತಡೆಯಿರಿ, ಆಳವಿಲ್ಲದ ನೀರಿನಲ್ಲಿ ಕೆಸರು ಅಥವಾ ಮಣ್ಣನ್ನು ಕೆದಕುವುದನ್ನು ತಪ್ಪಿಸಿ, ಈಜುಕೊಳಗಳನ್ನು ಸರಿಯಾಗಿ ಕ್ಲೋರಿನೇಟ್ ಮಾಡಿ ಉತ್ತಮವಾಗಿ ನಿರ್ವಹಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ, ಮೂಗನ್ನು ಸ್ವಚ್ಛಗೊಳಿಸಲು / ಸೈನಸ್ ತೊಳೆಯಲು ಕುದಿಸಿ ಆರಿಸಿದ ನೀರು ಅಥವಾ ಡಿಸ್ಟಿಲ್ಡ್ ನೀರ ಅನ್ನು ಮಾತ್ರ ಬಳಸಿ, ನೀರಿನ ಮೂಲಗಳ ಸಂಪರ್ಕದ ನಂತರ ಯಾವುದೇ ವ್ಯಕ್ತಿಯಲ್ಲಿ ಜ್ವರ, ತೀವ್ರ ತಲೆನೋವು, ವಾಂತಿ, ಕುತ್ತಿಗೆ ಬಿಗಿತ ಅಥವಾ ಪ್ರಜ್ಞೆಯಲ್ಲಿ ಬದಲಾವಣೆ ಕಂಡುಬಂದರೆ, ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ತಿಳಿಸಿದ್ದಾರೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma