ವೆನ್‍ಲಾಕ್ ಆಸ್ಪತ್ರೆಯ ವಿವಿಧ ವಿಭಾಗ ರೋಗಿಗಳಿಗೆ ಜನಸ್ನೇಹಿ ಮಾಡಲು ಮಾಸ್ಟರ್ ಪ್ಲಾನ್: ಡಿಸಿ ದರ್ಶನ್

Spread the love

ಮಂಗಳೂರು: ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಿ ಕಾರ್ಯರೂಪಕ್ಕೆ ತರುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಅವರು ಸೂಚನೆ ನೀಡಿದರು.

‌ವೆನ್‍ಲಾಕ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳನ್ನು ರೋಗಿಗಳಿಗೆ ಸ್ನೇಹಿಯಾಗಿ ಕಾರ್ಯರೂಪಕ್ಕೆ ತರಲು ಮಾಸ್ಟರ್ ಪ್ಲಾನ್ ಅಗತ್ಯ ಆಗಿದ್ದು, ಈ ನಿಟ್ಟಿನಲ್ಲಿ ಶೀಘ್ರವಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು.

ವೆನ್‍ಲಾಕ್ ಆಸ್ಪತ್ರೆ ಪ್ರಸಕ್ತ ಇರುವ ಹೊರರೋಗಿ ವಿಭಾಗಗಳ ಕಟ್ಟಡವನ್ನು ತೆರವುಗೊಳಿಸಿ ನೂತನ ಅತ್ಯಾಧುನಿಕ ಮಾದರಿ ಒ.ಪಿ.ಡಿ ಕಟ್ಟಡವನ್ನು ನಿರ್ಮಿಸಲು ರಾಜ್ಯ ಸರಕಾರದಿಂದ 70 ಕೋಟಿ ರೂಪಾಯಿ ಅನುದಾನ ಮಂಜೂರಿ ಆಗಿದೆ. ಪ್ರಸಕ್ತ ಅಲ್ಲಿರುವ ಎಲ್ಲ ವಿಭಾಗಗಳನ್ನು ಟ್ರಾಮಾ ಬ್ಲಾಕ್‍ಗೆ ಸ್ಥಳಾಂತರಿಸಿ ಹಳೆ ಒ.ಪಿ.ಡಿ ಕಟ್ಟಡವನ್ನು ಕೆಡವಲಾಗುವುದು. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವೆನ್‍ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಅವರು ತಿಳಿಸಿದರು.

ರೋಗಿಗಳಿಗೆ ನೆರವಾಗಲು ಒ.ಪಿ.ಡಿ, ಎಕ್ಸ್ ರೇ, ರೇಡಿಯೋಲಜಿ ಮತ್ತಿತರ ಘಟಕಗಳನ್ನು ಒಂದೇ ಕಡೆ ನಿರ್ಮಿಸಲು ಜಿಲ್ಲಾಧಿಕಾರಿ ದರ್ಶನ್ ಅವರು ಸೂಚಿಸಿದರು.

ಲೇಡಿಗೋಶನ್ ಆಸ್ಪತ್ರೆಗೆ ಪ್ರತ್ಯೇಕ ಆರೋಗ್ಯ ರಕ್ಷಾ ಸಮಿತಿ ರಚಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ವೆನ್‍ಲಾಕ್‍ನಲ್ಲಿ ಪಿ.ಎಂ ಅಭಿಮ್ ಯೋಜನೆ ಅಡಿ 50 ಬೆಡ್‍ಗಳ ಕ್ರಿಟಿಕಲ್ ಕೇರ್ ಕಟ್ಟಡದ ಕಾಮಗಾರಿ ಕೊನೆಯ ಹಂತದಲ್ಲಿದೆ. ಅತ್ತಾವರ ರಸ್ತೆಯಲ್ಲಿ ಇರುವ ವೆನ್‍ಲಾಕ್‍ನ 2.71 ಎಕರೆ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಪೇ ಅಂಡ್ ಪಾರ್ಕಿಂಗ್ ಕಾಮಗಾರಿಗೆ ಮಹಾನಗರಪಾಲಿಕೆಗೆ ಪತ್ರ ಬರೆಯಲಾಗಿದೆ ಎಂದು ಸಭೆಗೆ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಅವರು ತಿಳಿಸಿದರು.

ವೆನ್‍ಲಾಕ್ ಹೊಸ ಸರ್ಜಿಕಲ್ ಬ್ಲಾಕ್ ಕಟ್ಟಡದ ನೆಲಮಹಡಿಯ ಮಳಿಗೆಗಳನ್ನು ವಾಣಿಜ್ಯ ಉಪಯೋಗಕ್ಕೆ ಹರಾಜು ಮೂಲಕ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ನರ್ವಾಡೆ ವಿನಾಯಕ್ ಕಾರ್ಬಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *