ಕರಾವಳಿ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ವಿನಯ್ ಹೆಗ್ಡೆ ಸಮಾಜ ಸೇವೆ ಎಂದಿಗೂ ಮರೆಯಲ್ಲ: ಸಚಿವೆ ನಿರ್ಮಲಾ ಸೀತಾರಾಮನ್

2806

ಮಂಗಳೂರು: ಒಂದು ದಶಕದಲ್ಲಿ ದೇಶವು ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಸಾಕಷ್ಟು ಇಂಬು ನೀಡಿ, ವಿಶ್ವವಿದ್ಯಾಲಯ ಸ್ಥಾಪಿಸಿ ಶ್ರೇಷ್ಠತೆಯ ಪ್ರತೀಕವಾಗಿ ಗುರುತಿಸಿಕೊಂಡ ನಿಟ್ಟೆ ವಿನಯ ಹೆಗ್ಡೆ ಅವರ ಶೈಕ್ಷಣಿಕ ಮತ್ತು ಸಮಾಜ ಸೇವೆ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ ಮಂಗಳವಾರ ನಡೆದ ನಿಟ್ಟೆ ಡಾ. ಎನ್.ವಿನಯ ಹೆಗ್ಡೆ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಕಸಿತ ಭಾರತ-2047ರ ದೃಷ್ಟಿಕೋನ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ದಿಕ್ಕುಅನ್ನು ಡಾ. ಎನ್.ವಿನಯ ಹೆಗ್ಡೆ ತೋರಿಸಿದ್ದಾರೆ. ಇಂತಹ ಅನೇಕ ಶಿಕ್ಷಣ ತಜ್ಞರು ಕರಾವಳಿಗೆ ಮಾತ್ರವಲ್ಲದೆ ರಾಜ್ಯ ಮತ್ತು ದೇಶದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದ್ದಾರೆ. ವಿಕಸಿತ ಭಾರತ ಎಂಬುದು ಬಹು ದೂರದ ಗುರಿಯಲ್ಲ, ಇನ್ನೂ ಎರಡು ದಶಕಗಳಲ್ಲೇ ಸಾಧಿಸಬೇಕಾದ ಮಹತ್ವದ ಹಂತ ಆಗಿದೆ. 2047ರೊಳಗೆ ಭಾರತವನ್ನು ಸಮೃದ್ಧ ಮತ್ತು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

2806

2014 ರ ಹಣಕಾಸು ವರ್ಷದಲ್ಲಿ 1.9 ಲಕ್ಷ ಕೋಟಿ ರೂಪಾಯಿ ಮಟ್ಟದಲ್ಲಿದ್ದ ಆರ್ಥಿಕ ವಲಯವು 2026 ರ ವೇಳೆಗೆ 21.6 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಇದು ದೇಶದ ಆರ್ಥಿಕ ಸಾಮರ್ಥ್ಯದಲ್ಲಿ ಮಹತ್ತರ ಬದಲಾವಣೆ ಸೂಚಿಸುತ್ತದೆ. ಅದೇ ರೀತಿ ಚಂದ್ರಯಾನ-3 ರಂತಹ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಗಳು ವಿಶ್ವದ ಗಮನ ಸೆಳೆದಿವೆ ಎಂದರು.

ಭಾರತವು ಪ್ರಾಚೀನ ಕಾಲದಿಂದಲೂ ಶ್ರೀಮಂತ ಸಂಸ್ಕೃತಿ ಮತ್ತು ಆರ್ಥಿಕ ಶಕ್ತಿ ಹೊಂದಿದ ದೇಶ. ವಿಶ್ವದ ಜತೆಗೆ ವ್ಯಾಪಾರ, ಸಾಂಸ್ಕೃತಿಕ ವಿನಿಮಯಗಳ ಮೂಲಕ ಭಾರತ ಪ್ರಮುಖ ಸ್ಥಾನವನ್ನು ಪಡೆದಿತ್ತು. ಪ್ರಸಕ್ತ ಭಾರತ ತನ್ನ ಮೂಲ ಶಕ್ತಿಯನ್ನು ಮರು ಸ್ಥಾಪನೆ ಮಾಡುವ ಮೂಲಕ ವಿಶ್ವದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ತಂತ್ರಜ್ಞಾನಗಳು ಅಭಿವೃದ್ಧಿ ಆಗಿರುವ ಪ್ರಸಕ್ತ ಕಾಲಘಟ್ಟದಲ್ಲಿ ಯುವಜನತೆ ಹೆಚ್ಚಿನ ಅವಕಾಶಗಳು, ನಾವಿನ್ಯತೆ ಮತ್ತು ಜಾಗತಿಕ ಮಟ್ಟದ ಸ್ಪರ್ಧಾತ್ಮಕತೆ ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ, ಇಂದಿನ ಸಾಧನೆಗಳನ್ನು ದೀರ್ಘಕಾಲಿಕ ಮತ್ತು ಸಮಗ್ರ ಪರಿವರ್ತನೆಗೆ ರೂಪಾಂತರಿಸುವುದು ಮುಂದಿನ ಸವಾಲಾಗಿದೆ. ಆಮದುಗಳ ಮೇಲಿನ ಅವಲಂಬನೆಯಿಂದ ದೇಶದ ಅಭಿವೃದ್ಧಿ ನಿರೀಕ್ಷಿಸಲಾಗದು. ಬದಲಾಗಿ, ಉತ್ಪನ್ನಗಳನ್ನು ದೇಶದಲ್ಲೇ ನಿರ್ಮಿಸುವುದರ ಮೂಲಕ ಭಾರತವನ್ನು ಬಲಿಷ್ಠ ಕೈಗಾರಿಕಾ ಕೇಂದ್ರವನ್ನಾಗಿ ರೂಪಿಸಬೇಕಿದೆ ಎಂದರು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಇದ್ದರು.

ನಿಟ್ಟೆ ವಿವಿಯ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕುಲಪತಿ ವಿಶಾಲ್ ಹೆಗ್ಡೆ ಸ್ವಾಗತಿಸಿದರು. ಉಪ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ವಂದಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma