ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮವಹಿಸಿದ ದೇವರ ದಾಸಿಮಯ್ಯ: ಎಂ. ಎ. ಗಫೂರ್

ದೇವರ ದಾಸಿಮಯ್ಯ ಜಯಂತಿ

ಉಡುಪಿ: 12 ನೇ ಶತಮಾನದ ಆದ್ಯ ವಚನಕಾರ, ನೇಕಾರ ಸಮುದಾಯದ ಆರಾಧ್ಯ ದೈವ ದೇವರ ದಾಸಿಮಯ್ಯ ಅವರು ಸರಳ ಭಾಷೆಯಲ್ಲಿ ಸರ್ವರೂ ಅರಿಯುವಂತೆ ವಚನಗಳನ್ನು ರಚಿಸುವ ಮೂಲಕ ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮ ವಹಿಸಿದ್ದರು ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಸಹಯೋಗದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ದೇವರ ದಾಸಿಮಯ್ಯ ಜಯಂತಿ 2

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶೋಭಾ ಹರಿಪ್ರಸಾದ್ ಉಡುಪಿ ಅವರು ಮಾತನಾಡಿ, ಭಾರತ ದೇಶದ ಸಾಹಿತ್ಯ ಸಾವಿರಾರು ವರ್ಷಗಳಿಂದ ಬೆಳೆದುಬಂದ ಜಗತ್ತಿನ ಹಳೆಯ ಸಾಹಿತ್ಯವಾಗಿದೆ. ಈ ಸಾಹಿತ್ಯವನ್ನು ಪ್ರಾಚೀನ ಕಾಲದ ಸಾಹಿತ್ಯ, ಮಧ್ಯಕಾಲೀನ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯವೆಂದು ವಿಭಾಗಿಸಲಾಗಿದೆ. ಇದರಲ್ಲಿ ಮಧ್ಯಕಾಲೀನ ಸಾಹಿತ್ಯ 8 ರಿಂದ 18 ನೇ ಶತಮಾನದವರೆಗೆ ಬೆಳೆದುಬಂದ ಸಾಹಿತ್ಯವಾಗಿದ್ದು, ಇದರಲ್ಲಿ ವಚನ ಸಾಹಿತ್ಯ ಬಹಳ ಮಹತ್ತರ ಪಾತ್ರ ವಹಿಸುತ್ತದೆ. ಸಾಮಾಜಿಕ, ಸಾಂಸ್ಕೃತಿಕ,
ಆರ್ಥಿಕ, ಶೈಕ್ಷಣಿಕ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ವಚನ ಸಾಹಿತ್ಯ ರಚನೆಗೊಂಡಿದ್ದವು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರು ಮಾತನಾಡಿ, ನೇಕಾರ ಸಮುದಾಯದ ಮೂಲ ಪುರುಷ ಹಾಗೂ 11 ನೇ ಶತಮಾನದ ವಚನಕಾರ ದೇವರ ದಾಸಿಮಯ್ಯ ಅವರು ತ್ರಿಪದಿಗಳ ರೂಪದಲ್ಲಿ ಬಹಳಷ್ಟು ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗಿಂತ ಮುಂಚಿನ ಕಾಲದ ವಚನಕಾರರಾಗಿದ್ದು, ಶರಣ ಚಳುವಳಿಗೆ ಭದ್ರ ಬುನಾದಿ ಹಾಕಿದವರಲ್ಲಿ ಪ್ರಮುಖರು. ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸಿ, ಸಮಸಮಾಜ ನಿರ್ಮಾಣದ ಸಂದೇಶ ನೀಡಿದ್ದಾರೆ
ಎಂದರು.

ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಉಡುಪಿ ಇದರ ಅಧ್ಯಕ್ಷ ರವಿ ಶೆಟ್ಟಿಗಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮುದಾಯದಲ್ಲಿ ಸಾಧನೆ ಮಾಡಿದ ಗಿರೀಶ್ ಶೆಟ್ಟಿಗಾರ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು.

ಸಮುದಾಯದ ಪದಾಧಿಕಾರಿಗಳು, ಇಲಾಖೆ ಸಿಬ್ಬಂದಿ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಜಯರಾಮ ಶೆಟ್ಟಿಗಾರ್ ಮಣಿಪಾಲ ನಿರೂಪಿಸಿ, ಸಮುದಾಯದ ಕಾರ್ಯದರ್ಶಿ ಡಾ.ವೆಂಕಟರಾಯ್ ಶೆಟ್ಟಿಗಾರ್ ವಂದಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma