ಮಂಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದ ನಡುವೆ ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ ಹೊತ್ತ ಹಡಗು ಹಾಗೂ ಅಮೆರಿಕದಿಂದ 16 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಹಡಗು ಮಂಗಳೂರಿನ ನವಮಂಗಳೂರು ಬಂದರು ತಲುಪಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪರಿಣಾಮ ಸ್ವಲ್ಪ ಮಟ್ಟಿಗೆ ಗ್ಯಾಸ್ ಸಿಲಿಂಡರ್ ಹಾಗೂ ತೈಲ ಸಮಸ್ಯೆ ನಿವಾರಣೆ ಆಗಲಿದೆ ಎಂದು ಹೇಳಬಹುದು.
ರಷ್ಯಾದ ಪ್ರಿಮೊರ್ಸ್ಕ್ ಎಂಬಲ್ಲಿಂದ ಉರಾಲ್ ಕಚ್ಚಾ ತೈಲ ತುಂಬಿಕೊಂಡು ‘ಅಕ್ವಾ ಟೈಟನ್’ ಎಂಬ ಹಡಗು ಚೀನಾದ ರಿಜಾವೊ ಬಂದರಿನತ್ತ ಹೊರಟಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ದಿಕ್ಕು ಬದಲಿಸಿ ಮಂಗಳೂರಿಗೆ ಶನಿವಾರ ತಡರಾತ್ರಿ ಬಂದಿದೆ. ಈ ಕಚ್ಚಾ ತೈಲವನ್ನು ಎಂಆರ್‌ಪಿಎಲ್ ಸಂಸ್ಕರಣಾ ಘಟಕಕ್ಕೆ ಪೂರೈಸಲಾಗುತ್ತಿದ್ದು, ಹಡಗಿನಿಂದ ತೈಲ ಇಳಿಸುವ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಕುರಿತು ನವಮಂಗಳೂರು ಬಂದರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದು, ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ ಹೊತ್ತ ಹಡಗು ಶನಿವಾರ ತಡರಾತ್ರಿ ಬಂದರಿಗೆ ಸುರಕ್ಷಿತವಾಗಿ ತಲುಪಿದೆ ಎಂದು ತಿಳಿಸಿದ್ದಾರೆ.





