ಮಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡಿಸಿದ ಆಡಳಿತಾಧಿಕಾರಿ, ಡಿಸಿ ದರ್ಶನ್

Spread the love

ಮಂಗಳೂರು: 2026 -27 ನೇ ಸಾಲಿನ ಬಜೆಟ್ ಅಂದಾಜು ಮೊತ್ತ 93,768. 94 ಲಕ್ಷ ರೂಪಾಯಿ (937.69 ಕೋಟಿ) ಇದರಲ್ಲಿ ಅಂದಾಜು 781.51 ಕೋಟಿ ರೂಪಾಯಿ ವೆಚ್ಚ ಪಾವತಿ ಆಗಿದ್ದು, ಈ ಮೂಲಕ ಅಂದಾಜು 156.17 ಕೋಟಿ ರೂ.ಗಳ ಮಿಗತೆ ಬಜೆಟ್ ಅನ್ನು ಪಾಲಿಕೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಗುರುವಾರ ಮಂಡನೆ ಮಾಡಿದರು.

2025-26ನೆ ಸಾಲಿನಲ್ಲಿ ಬಜೆಟ್‌ನಲ್ಲಿ ಒಟ್ಟು 644.64 ಕೋಟಿ ರೂಪಾಯಿಗಳು ಜಮೆ ನಿರೀಕ್ಷಿಸಲಾಗಿದ್ದು, ಡಿಸೆಂಬರ್ 2025 ರ ಅಂತ್ಯಕ್ಕೆ 342.25 ಕೋಟಿ ರೂಪಾಯಿ ಜಮೆ ಸ್ವೀಕರಿಸಲಾಗಿದೆ. ಕಳೆದ ಸಾಲಿನಲ್ಲಿ 789.72 ಕೋಟಿ ರೂಪಾಯಿ ಪಾವತಿಗಳಲ್ಲಿ ಪಾಲಿಕೆಯ ಸ್ವಯಂ ಸಂಪನ್ಮೂಲ ಕ್ರೋಢೀಕರಣ ಹಾಗೂ ಸರಕಾರದಿಂದ ಬಿಡುಗಡೆ ಆದ ಅನುದಾನಗಳ ಆಧಾರದಲ್ಲಿ ಡಿಸೆಂಬರ್ ಅಂತ್ಯಕ್ಕೆ 393.47 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

2026- 27ನೆ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 90 ಕೋಟಿ ರೂಪಾಯಿ, ನೀರು ಸರಬರಾಜು ಶುಲ್ಕ 55 ಕೋಟಿ, ಘನತ್ಯಾಜ್ಯ ನಿರ್ವಹಣಾ ತೆರಿಗೆ 26 ಕೋಟಿ , ಇತರ ಆದಾಯ 26.48 ಕೋಟಿ ರೂ., ಕಟ್ಟಡ ಪರವಾನಗಿ – ಪ್ರೀಮಿಯಂ ಎಫ್‌ಎಆರ್‌ನಿಂದ 26 ಕೋಟಿ , ಮಾರುಕಟ್ಟೆ ಸಾಲ 7.31 ಕೋಟ, ಬ್ಯಾಂಕ್ ಬಡ್ಡಿ 15 ಕೋಟಿ, ಮಾರುಕಟ್ಟೆ, ಇತರ ಬಾಡಿಗೆ 5.47 ಕೋಟಿ, ರಸ್ತೆ ಕಡಿತ, ಪುನರ್ ನಿರ್ಮಾಣ ಶುಲ್ಕದಿಂದ 3 ಕೋಟಿ ಸೇರಿದಂತೆ ಒಟ್ಟು 337.25 ಕೋಟಿ ರೂ.ಗಳ ಅಂದಾಜು ಆದಾಯ ನಿರೀಕ್ಷಿಸಲಾಗಿದೆ. ರಾಜ್ಯ ಸರಕಾರದಿಂದ ವೇತನ, ಎಸ್‌ಎಫ್‌ಸಿ ಮುಕ್ತ ನಿಧಿ, ಪೌರ ಕಾರ್ಮಿಕರ ನೇರ ಪಾವತಿ ವೇತನ, ಸ್ಟ್ಯಾಂಪ್ ಶುಲ್ಕದ ಸರ್‌ಚಾರ್ಜ್ ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು 199.23 ಕೋಟಿ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ. ಕೇಂದ್ರದಿಂದ ಅಮೃತ್ 2.0 ಜಲ್ ಹಿ ಅಮೃತ್, ನಲ್ಮ್, ಸ್ವಚ್ಛ ಭಾರತ ಮಿಷನ್, 15 ನೇ ಹಣಕಾಸು ಮುಕ್ತ ಅನುದಾನ, 16 ನೇ ಹಣಕಾಸು, ಎನ್‌ಜಿಟಿ ಸೇರಿದಂತೆ ಒಟ್ಟು 93.36 ಕೋಟಿ ರೂಪಾಯಿಗಳನ್ನು ನಿರೀಕ್ಷಿಸಲಾಗಿದೆ ಎಂದರು.

ಪಾಲಿಕೆ ಕಚೇರಿಯಲ್ಲಿ ಆರಂಭಿಸಿರುವ ಮಡಿಲು ಶಿಶುಪಾಲನಾ ಕೇಂದ್ರವನ್ನು ವಲಯ ಕಚೇರಿಗಳಾದ ಸುರತ್ಕಲ್ ಹಾಗೂ ಕದ್ರಿಯಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕೆ 50 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಕಂಬಳವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಂಗಳೂರು ನಗರದಲ್ಲಿ ನಡೆವ ಮೂರು ಕಂಬಗಳಿಗೆ ತಲಾ 3 ಲಕ್ಷ ರೂಪಾಯಿಯಂತೆ ಅನುದಾನ ನೀಡಲು 9 ಲಕ್ಷ ರೂಪಾಯಿ ಮೀಸಲಿರಿಸಲಾಗಿದೆ. ಯಕ್ಷಗಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 10 ಲಕ್ಷ ರೂಪಾಯಿಗಳ ಅನುದಾನ ಮೀಸಲು ಇಡಲಾಗಿದೆ ಎಂದರು.

ತುಳು ಭಾಷೆ ಪ್ರೋತ್ಸಾಹಿಸುವ ಉದ್ದೇಶದಿಂದ ತುಳು ಯುವ ಕವಿಗಳು, ಕಲಾಕೃತಿಗಳು ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ ನಾಟಕಗಳಿಗೆ ಗೌರವ ನೀಡುವ ಉದ್ದೇಶದಿಂದ 50 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಕಲೆಗಳ ಪ್ರಕಾರ, ಮಹತ್ವದ ಆಧಾರದ ಮೇಲೆ ಈ ಅನುದಾನ ವಿನಿಯೋಗಿಸಲಾಗುತ್ತದೆ. ಪೌರ ಕಾರ್ಮಿಕರಿಗೆ ಕಲ್ಯಾಣ ನಿಧಿ: ಪೌರ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ದೃಢಪಡಿಸುವ ಉದ್ದೇಶದಿಂದ 2026-27ನೆ ಸಾಲಿಗೆ 50 ಲಕ್ಷ ರೂ.ಗಳನ್ನು ಗುಂಪು ಜೀವ ವಿಮಾ ಯೋಜನೆ ಮೀಸಲಿರಿಸಲಾಗಿದೆ. ಪ್ರತಿ ಕಾರ್ಮಿಕರಿಗೆ ತಗಲುವ ವಾರ್ಷಿಕ ಪ್ರೀಮಿಯಂ ಅನ್ನು ಪಾಲಿಕೆಯಿಂದಲೇ ಭರಿಸಲಾಗುತ್ತದೆ ಎಂದರು.

ಪಾಲಿಕೆ ವ್ಯಾಪ್ತಿಯ ಜನಸಂದಣಿ ಇರುವ ಸ್ಥಳಗಳಲ್ಲಿ ವಿಶೇಷವಾಗಿ ಬಸ್ ನಿಲ್ದಾಣ, ಮಾರುಕಟ್ಟೆ, ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸುಸಜ್ಜಿತ ಶೌಚಾಲಯ ನಿರ್ಮಾಣ ಹಾಗೂ ಹಾಲಿ ಇರುವ ಸಾರ್ವಜನಿಕ ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು 1 ಕೋಟಿ ರೂ. ಕಾಯ್ದಿರಿಸಲಾಗಿದೆ. ವಯೋವೃದ್ಧರು, ವಿಕಲಚೇತನ ಮಕ್ಕಳ ಕ್ಷೇಮಾಭಿವೃದ್ಧಿಗೆ ಸ್ಪಂದಿಸುವ ಸಂಘ ಸಂಸ್ಥೆಗಳಿಗೆ 20 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಅಭಿಯಾನದ ಮುಂದುವರಿದ ಭಾಗವಾಗಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವ್ನಾಗಿಸಲು ಪ್ರತಿ ಮನೆಗೆ 2 ಬಟ್ಟೆಯ ಕೈ ಚೀಲಗಳನ್ನು ಈಡಲು 80 ಲಕ್ಷ ರೂ.ಮೊತ್ತ ಕಾಯ್ದಿರಿಸಲಾಗಿದೆ ಎಂದರು.

ಕದ್ರಿಯಲ್ಲಿ ನಿರ್ಮಾಣವಾಗಿರುವ ಹಾಗೂ ಟಾಗೋರ್ ಪಾರ್ಕ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಬನಹತ್ ಗಾತ್ರದ ರಾಷ್ಟ್ರ ಧ್ವಜಗಳ ವಾರ್ಷಿಕ ನಿರ್ವಹಣೆಯನ್ನು ಪಾಲಿಕೆಯಿಂದ ಮಾಡಲಾಗುವುದು. ಪ್ರತಿ ತಿಂಗಳು ರಾಷ್ಟ್ರ ಧ್ವಜ ಬದಲಾವಣೆಯೊಂದಿಗೆ ಸಮರ್ಪಕ ನಿರ್ವಹಣೆಗಾಗಿ 12 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಮಂಗಳೂರು ನಗರವನ್ನು 2032ರ ವೇಳೆಗೆ ಸುಸಜ್ಜಿತ ಹಾಗೂ ನವೀನ ಮಾದರಿಯ ಸೌಕರ್ಯಗಳನ್ನು ಹೊಂದಿದ ಪ್ರಥಮ ಮಾದರಿ ನಗರವನ್ನಾಗಿಸಲು ಸ್ವಚ್ಛ ಮಂಗಳೂರು ಪರಿಕಲ್ಪನೆಯಡಿ ಸರ್ವತೋಮುಖ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 30 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್, ಕಂದಾಯ ಅಧಿಕಾರಿ (ಆಡಳಿತ) ಅಕ್ಷತಾ ಇದ್ದರು.

ಆಸರೆ- ಹೆಣ್ಣು ಮಕ್ಕಳ ಭರವಸೆ ಮಡಿಲು

ಪಾಲಿಕೆ ವ್ಯಾಪ್ತಿಯಲ್ಲಿ 14 ವರ್ಷದೊಳಗಿನ ಹೆಣ್ಣು ಮಕ್ಕಳು ವಿವಿಧ ರೀತಿಯ ದೌರ್ಜನ್ಯ, ಶೋಷಣೆಗೆ ಒಳಗಾದ, ಪೋಷಕರು- ಸಂಬಂಧಿಕರನ್ನು ಕಳೆದುಕೊಂಡು ಅನಾಥವಾಗಿರುವ, ರಸ್ತೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡರುವ ಹೆಣ್ಣು ಮಕ್ಕಳ ಪೋಷಣೆ, ರಕ್ಷಣೆ, ಶಿಕ್ಷಣ ಹಾಗೂ ಭವಿಷ್ಯದ ಮೇಲ್ವಿಚಾರಣೆ, ಜವಾಬ್ಧಾರಿ ವಹಿಸುವ ಸಂಸ್ಥೆಗಳಿಗೆ ತಲಾ 15 ಲಕ್ಷ ರೂ.ನಂತೆ 30 ಲಕ್ಷ ರೂ.ಗಳ ಪ್ರೋತ್ಸಾಹ ಧನ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು.

ದೇಶಕ್ಕಾಗಿ ಹೋರಾಡಿ ಮೃತಪಟ್ಟ ವೀರ ಯೋಧರ ಕುಟುಂಬಕ್ಕೆ ಸ್ಪಂದಿಸವ ನಿಟ್ಟಿನಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಗಳ ಜತೆಗೆ ಅರೆ ಸೈನಿಕ ಪಡೆಗಳ (ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಅಸ್ಸಾಂ ರೈಫಲ್ಸ್, ಎಸ್‌ಎಸ್‌ಬಿ ಮತ್ತು ಎನ್‌ಎಸ್‌ಜಿ) ವೀರ ಮರಣ ಹೊಂದಿದ ಯೋಝರ ಆಸರೆಗಾಗಿ ತಲಾ 5 ಲಕ್ಷ ರೂ.ನಂತೆ ಧನ ಸಹಾಯ ನೀಡಲು 20 ಲಕ್ಷ ಮೀಸಲಿಡಲಾಗಿದೆ ಎಂದರು.

ಬೀದಿ ನಾಯಿಗಳ ಪುನರ್ವಸತಿ ಕೇಂದ್ರ

ಬೀದಿ ನಾಯಿಗಳ ಹಾವಳಿ ತಡೆಗಟ್ಟಿ ಅವುಗಳಿಗೆ ಸೂಕ್ತ ಆಶ್ರಯ ಒದಗಿಸಲು ಈಗಾಗಲೇ ಮಂಗಳೂರು ತಾಲೂಕಿನ ಬೊಂಡಂತಿಲ ಗ್ರಾಮದಲ್ಲಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ. ಅಲ್ಲಿ ವ್ಯವಸ್ಥೆ ಕಲ್ಪಿಸಲ 2 ಕೋಟಿ ರೂ. ಕಾಯ್ದಿರಿಸಲಾಗಿದ್ದು, ಆಸಕ್ತ ಸರಕಾರತೇರ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗಳ ಮೂಲಕ ನಿರ್ವಹಣೆಗೆ ಯೋಜನೆ. ಪಚ್ಚನಾಡಿ ಪ್ರದೇಶದ ಡಂಪಿಂಗ್ ಯಾರ್ಡ್‌ನಿಂದ ಸ್ಥಳೀಯರಿಗೆ ಆಗುತ್ತಿರುವ ದುರ್ವಾಸನೆಯನ್ನು ತಡೆಗಟ್ಟಲು ಆಧುನಿಕ ತಂತ್ರಜ್ಞಾನ ಬಳಸಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸೂಕ್ತ ಪರಿಹಾರ ನೀಡುವ ವ್ಯಕ್ತಿ ಅಥವಾ ಸಂಸ್ಥಛೆಗಳಿಗೆ ಉತ್ತೇಜನ ಹಾಗೂ ನಗರ ವ್ಯಾಪ್ತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ವಿನೂತನ ವಿಧಾನಗಳಿಗೆ 50 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.

 

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *