ಮಂಗಳೂರು: ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ, ಹೊಸ ಸ್ಟಾರ್ಟ್‌ಅಪ್‌ಗಳಿಗೆ ಪ್ರೇರಣೆ ನೀಡುವ ಮೌಲ್ಯವರ್ಧಿತ ಯೋಜನೆಗಳಿಗೆ ಬ್ಯಾಂಕ್‌ಗಳು ಸಾಲ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮುದ್ರಾ ಯೋಜನೆ, ಪಿಎಂ ಸ್ವ ನಿಧಿ ಸೇರಿದಂತೆ ಸರಕಾರಿ ಪ್ರಾಯೋಜಿತ ಯೋಜನೆಗಳಿಗೆ ಸಾಲ ನೀಡುವಲ್ಲಿ ಕೆಲ ಬ್ಯಾಂಕ್‌ಗಳ ಪ್ರಗತಿಯಲ್ಲಿ ಕುಂಠಿತ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವಿನಾಯಕ ನರ್ವಾಡೆ ಅವರು ಅಸಮಾಧಾನ ಹೊರಹಾಕಿದರು.
ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಮಂಗಳವಾರ ನಡೆದ ಜಿಲ್ಲಾ ಸಮಾಲೋಚನಾ ಸಭೆ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ವಿಮಾನ ಯಾನ, ಜಲಮಾರ್ಗ ಹಾಗೂ ಹೆದ್ದಾರಿ ಸಂಪರ್ಕಗಳಿಂದ ಕೂಡಿರುವ ಜಿಲ್ಲೆ ಆಗಿದ್ದು, ಇಲ್ಲಿ ವಿನೂತನ ಉದ್ಯಮಗಳಿಗೆ ವಿಫುಲ ಅವಕಾಶ ಇವೆ. ಬ್ಯಾಂಕ್‌ಗಳು ಈ ಪ್ರಯೋಜನ ಪಡೆದು, ಅರ್ಹ ಫಲಾನುಭವಿಗಳಿಗೆ ಅಗತ್ಯ ಹಣಕಾಸಿನ ನೆರವು ನೀಡಬೇಕು. ಸರಕಾರ ನೀಡುವ ಯೋಜನೆಗಳ ಪ್ರಯೋಜನ ಜನರಿಗೆ ಸಿಗುವಂತೆ ಆಗಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ಗಮನ ಹರಿಸಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಎನ್. ಶೆಟ್ಟಿ ಅವರು ಮಾತನಾಡಿ, ಆದ್ಯತಾ ವಲಯ ಶೈಕ್ಷಣಿಕ ಕ್ಷೇತ್ರದಲ್ಲಿ 157.09 ಕೋಟಿ ರೂಪಾಯಿ ಸಾಲ ವಿತರಣೆಯ ಮೂಲಕ ತ್ರೈಮಾಸಿಕ ಗುರಿ 164. 22 ಕೋಟಿ ರೂ.ಗಳಲ್ಲಿ ಶೇ 95.65 ನಿರ್ವಹಣೆ ಸಾಧಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಡಿ 6806.78 ಕೋಟಿ ರೂಪಾಯಿ ಸಾಲ ವಿತರಣೆ ಆಗಿದ್ದು, ಶೇ 115.41 ರಷ್ಟು ನಿರ್ವಹಣೆ ಆಗಿದೆ. ಕೃಷಿ ಕ್ಷೇತ್ರದಲ್ಲಿಯೂ ಗುರಿ ಮೀರಿದ ಸಾಧನೆ ಆಗಿದ್ದು, 10346.21 ಕೋಟಿ ರೂ. ವಿತರಣೆ ಆಗಿದೆ ಎಂದರು.
ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 138769.88 ಕೋಟಿ ರೂಪಾಯಿ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 8.50ರಷ್ಟು ಬೆಳವಣಿಗೆಯಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ಠೇವಣಿ 82,070.67 ಕೋಟಿರ ಊ.ಗಳಾಗಿದ್ದು. ಸಾಲವು 56,699.21 ಕೋಟಿ ರೂ.ಗಳಾಗಿವೆ ಎಂದು ಕವಿತಾ ಶೆಟ್ಟಿ ವಿವರಿಸಿದರು.
ಆರ್‌ಬಿಐ ಎಜಿಎಂ ಅರುಣ್ ಕುಮಾರ್ ಪಿ., ಲೀಡ್ ಬ್ಯಾಂಕ್ ಡಿಜಿಎಂ ಶೈಲೇಂದ್ರನಾಥ್ ಶೇಟ್, ನಬಾರ್ಡ್ ಡಿಜಿಎಂ ಸಂಗೀತ ಕರ್ತಾ ಇದ್ದರು.
ಮುದ್ರಾ ಯೋಜನೆ ಅಡಿ 644.29 ಕೋಟಿ ಸಾಲ: ಕವಿತಾ ಶೆಟ್ಟಿ
2025 ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಮುದ್ರಾ ಯೋಜನೆ ಅಡಿ ಜಿಲ್ಲೆಯಲ್ಲಿ 644.29 ಕೋಟಿ ರೂಪಾಯಿ ಸಾಲ ವಿತರಿಸಲಾಗಿದ್ದು, ಪ್ರಧಾನ ಮಂತ್ರಿ ಜನಧನ್ ಯೋಜನೆ ಅಡಿ 29010 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಅಡಿ 41,657 ಮಂದಿ ಯೋಜನೆಗೆ ನೋಂದಣಿ ಮಾಡಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 88,780 ಮಂದಿಯನ್ನು ನೋಂದಣಿ ಮಾಡಲಾಗಿದ್ದು, ಅಟಲ್ ಪಿಂಚಣಿ ಯೋಜನೆಯಡಿ 25,425 ಮಂದಿಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಪಿಎಂ ಸ್ವ ನಿಧಿ ಯೋಜನೆ ಅಡಿ ಪ್ರಥಮ ಕಂತಿನ ಅಡಿ 13,234, ದ್ವಿತೀಯ ಕಂತಿನಡಿ 6352 ಹಾಗೂ ತೃತೀಯ ಕಂತಿನಡಿ 2181 ಮಂದಿಗೆ ಮಂಜೂರಾತಿ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಎನ್. ಶೆಟ್ಟಿ ಅವರು ಸಭೆಗೆ ಮಾಹಿತಿ ನೀಡಿದರು.





