ಕಟ್ಟಡ ಕಾಮಗಾರಿಗೆ ಕಚ್ಚಾ ಸಾಮಗ್ರಿ ಕೊರತೆ, ನಿರ್ಮಾಣ ಕ್ಷೇತ್ರಕ್ಕೆ ಕುತ್ತು ಸಂಭವ, ಕಾರ್ಮಿಕರ ತತ್ವಾರ: ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಆತಂಕ

1703

ಮಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆ, ಎಸ್‌ಐಆರ್ ಪ್ರಕ್ರಿಯೆಗಳು ನಡೆಯುತ್ತಿರುವ ಕಾರಣಕ್ಕೆ ಹೊರ ರಾಜ್ಯಗಳ ಕಾರ್ಮಿಕರು ತಮ್ಮ ಊರಿಗೆ ತೆರಳಿರುವ ಕಾರಣದಿಂದ ದ.ಕ. ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ಕ್ಷೇತ್ರ ತಲ್ಲಣಗೊಂಡಿದೆ. ಕಾರ್ಮಿಕರು ಹಾಗೂ ಕಚ್ಚಾ ವಸ್ತುಗಳ ಅಭಾವದಿಂದ ನಿರ್ಮಾಣ ಕ್ಷೇತ್ರ ಸ್ತಬ್ಧಗೊಳ್ಳುವ ಆತಂಕ ಎದುರಾಗಿದೆ ಎಂದು ದ.ಕ. ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಲ ವರ್ಷಗಳಿಂದ ನಿರ್ಮಾಣ ಕ್ಷೇತ್ರ ಅಗತ್ಯ ಮೂಲವಸ್ತುಗಳಾದ ಕೆಂಪುಕಲ್ಲು, ಮರಳು ಮತ್ತು ಎಂ ಸ್ಯಾಂಡ್ ಅಭಾವದಿಂದ ತತ್ತರಿಸುತ್ತಿದೆ. ಇದೀಗ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ನಡೆಯಲಿರುವ ಮತಪಟ್ಟಿ ಪರಿಷ್ಕರಣೆ, ಚುನಾವಣೆ ಹಾಗೂ ಹಬ್ಬದ ಕಾರಣ ಊರಿಗೆ ತೆರಳಿರುವ ಕಾರ್ಮಿಕರು ಹಿಂತಿರುಗದಿರುವುದು ಕ್ಷೇತ್ರಕ್ಕೆ ಮತ್ತಷ್ಟು ಹೊಡೆತ ನೀಡಿದೆ ಎಂದರು.

ದ.ಕ. ಜಿಲ್ಲೆಯಲ್ಲಿ ಬಹುತೇಕವಾಗಿ ಪಶ್ಚಿಮ ಬಂಗಾಲ ಸೇರಿದಂತೆ ಉತ್ತರ ಭಾರತದ ಎರಡೂವರೆ ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಶೇ. 90ರಷ್ಟು ಕಾರ್ಮಿಕರು ಹಬ್ಬ, ಮತದಾನ ಹಾಗೂ ಇತರ ಕಾರಣದಿಂದ ಊರಿಗೆ ತೆರಳಳಿದವರು ವಾಪಸ್ ಆಗಿಲ್ಲ. ಪ್ಲಾಸ್ಟರಿಂಗ್, ಬಾರ್ ಬೆಂಡ್ ಗ ನಂತಹ ಕುಶಲಕರ್ಮಿ ಕಾರ್ಯಕ್ಕೆ ಈ ಕಾರ್ಮಿಕರನ್ನೇ ನಿರ್ಮಾಣ ಕ್ಷೇತ್ರ ಅವಲಂಬಿಸಿದೆ ಎಂದರು.

ಸರಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಕೆಂಪು ಕಲ್ಲು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗುತ್ತಿಲ್ಲ. ನಾನ್ ಸಿಆರ್‌ಜೆಡ್ ಪ್ರದೇಶದ ಮರಳು ಅರ್ಧಕ್ಕೆ ಅರ್ಧ ಉಪಯೋಗಕ್ಕೆ ಬರುವುದಿಲ್ಲ. ಎಂ ಸ್ಯಾಂಡ್ ಕೊರತೆ ಕೂಡ ಇರುವ ಕಾರಣ ನಿರ್ಮಾಣ ಕ್ಷೇತ್ರಕ್ಕೆ ತೊಂದರೆಯಾಗಿದೆ. ಇದರಿಂದ ಗುತ್ತಿಗೆದಾರರು ವಹಿಸಿಕೊಂಡ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಪೂರ್ತಿಗೊಳಿಸಲಾಗದೆ ಕಟ್ಟಡ ಮಾಲಕರ ಜತೆ ಕಾನೂನು ಸಂಘರ್ಷ ಎದುರಿಸುವ ಪರಿಸ್ಥಿತಿ ಎದುರಾಗಿದೆ. ದ.ಕ. ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಕಚ್ಚಾ ವಸ್ತುಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕ್ರಮ ವಹಿಸಬೇಕು. ಕಾರ್ಮಿಕರ ಕೊರತೆ ನೀಗಿಸಲು ಸ್ಥಳೀಯ ಕಾರ್ಮಿಕರಿಗೆ ಉತ್ತೇಜ ಕಾರ್ಯಕ್ರಮ ವಹಿಸಬೇಕು ಎಂಜಿನಿಯರ್ಸ್ ಅಸೋಸಿಯೇಷನ್‌ನ ಉಜ್ವಲ್ ಡಿಸೋಜ ಆಗ್ರಹಿಸಿದರು.

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ದಿನಕರ್, ಕಾರ್ಯದರ್ಶಿ ಅಶೋಕ್ ಕುಳಾಯಿ, ಸತೀಶ್ ಜೋಗಿ, ಅರುಣ್ ರಾಜ್, ಕೆನರಾ ಬಿಲ್ಡರ್ಸ್ ಅಸೋಸಿಯೇಷನ್‌ ವಿನಾಯಕ ಪೈ ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma