ಮಂಗಳೂರು: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ ತಾಲ್ಲೂಕು ಹಾಗೂ ಯು.ಟಿ. ಫರೀದ್ ಫೌಂಡೇಷನ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಕೃಷಿ ಮೇಳ ಹಾಗೂ ಮುಡಿಪು ಉತ್ಸವ ಇದೇ 24, 25, 26 ರಂದು ಶ್ರೀ ಕೃಷ್ಣ ಧ್ಯಾನ ಮಂದಿರದಲ್ಲಿ ನಡೆಯಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
24 ರಂದು ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಕೃಷಿ ಮೇಳ ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಹಾರ ಮೇಳ ಉದ್ಘಾಟಿಸಲಿದ್ದಾರೆ. ಈ ಉತ್ಸವದಲ್ಲಿ ಹಿರಿಯ ಸಮಾಜಸೇವಕ ಡಾ. ಮದನ್ ಮೋಹನ್ ನಾಯ್ಕ್ ಅವರಿಗೆ ಸೇವಾ ಧುರಂದರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಹಲವು ಗಣ್ಯರಿಗೆ ಗೌರವಿಸಲಾಗುವುದು ಎಂದು ತಿಳಿಸಿದರು.
ಕೃಷಿ ಕುರಿತು ವಸ್ತು ಪ್ರದರ್ಶನ ಹಾಗೂ ಉಪಯುಕ್ತ ಮಾಹಿತಿ ನೀಡುವ ಗುರಿ ಇದೆ. ಗುಡ್ಡಗಾಡು ಓಟ, ಸ್ವಚ್ಛತಾ ಅಭಿಯಾನ, ಆಹಾರ ಮೇಳ, ಗಾಳಿಪಟ ಉತ್ಸವ, ಮಹಿಳೆಯರಿಗೆ ಸ್ಪರ್ಧೆಗಳು, ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ಸೇರಿದಂತೆ ಐತಿಹಾಸಿಕ ಕಾರ್ಯಕ್ರಮ ರೂಪಿಸುವ ಗುರಿ ಇದೆ ಎಂದು ಕಾರ್ಯಾಧ್ಯಕ್ಷ ದೇವದಾಸ್ ಭಂಡಾರಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಅವರು ಬಿಡುಗಡೆಗೊಳಿಸಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಿಪು ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಮದನ್ ಮೋಹನ್ ನಾಯ್ಕ್, ಕೋಶಾಧಿಕಾರಿ ರಾಧಾಕೃಷ್ಣ ರೈ ಉಮಿಯ, ಸಂಚಾಲಕ ಅಬ್ದುಲ್ ಜಲೀಲ್, ಪಾಲಿಕೆ ಮಾಜಿ ಸದಸ್ಯೆ ಅಪ್ಪಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಅವರು ಇದ್ದರು.





