ಜನರ ಸಮಸ್ಯೆಗಳಿಗೆ ಜನಸ್ಪಂದನೆ, ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಸಹಕಾರಿ ಎಂದ ಶಾಸಕ ಸತೀಶ್ ಸೈಲ್

Spread the love

ಕಾರವಾರ: ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಶೀಘ್ರದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜನ ಸ್ಪಂದನಾ ಕಾರ್ಯಕ್ರಮದ ಮೂಲಕ ಸಾಧ್ಯ ಆಗಲಿದೆ ಎಂದು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಆಡ್ವೈಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.

ಅವರು ಶನಿವಾರ ತಾಲೂಕು ಆಡಳಿತ, ತಾಲೂಕು ಪಂಚಾಯತ, ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಚಿತ್ತಾಕುಲಾ ಗ್ರಾಮ ಪಂಚಾಯತಿಯಲ್ಲಿ ನಡೆದ, ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಳೆಗಾಲದಲ್ಲಿ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಪ್ರಮಾಣದಲ್ಲಿ ಔಷಧಿ ದಾಸ್ತಾನು ಮಾಡಿಕೊಳ್ಳುವಂತೆ ಮತ್ತು ಅಂಬುಲೆನ್ಸ್ ಗಳನ್ನು ಸುಸಜ್ಜಿತವಾಗಿಟ್ಟುಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ನಾಯಿಗಳಿಂದ ರೇಬಿಸ್ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನಾಯಿಗಳಿಗೆ ಸಂತಾನ ಶಕ್ತಿಹರಣ ಮತ್ತು ರೇಬಿಸ್ ವ್ಯಾಕ್ಸಿನೇಷನ್ ನೀಡಬೇಕು ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಸ್ಕ್ರಾಪ್ ಅಂಗಡಿಗಳಿಂದ ಇಡೀ ಸದಾಶಿವಗಡವೇ ಸ್ವಚ್ಛತೆವಿಲ್ಲವೆಂಬಂತೆ ಭಾಸವಾಗುತ್ತಿದ್ದು, ಕೂಡಲೇ ಅಂಗಡಿ ಮಾಲೀಕರಿಗೆ ಕಾಪೌಂಡ್ ನಿರ್ಮಿಸಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿ ಇಲ್ಲವಾದ್ದಲ್ಲಿ, ನೋಟಿಸ್ ನೀಡಿ ಬಂದ್ ಮಾಡಿಸುವಂತೆ ಪಿಡಿಓ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿದರು.

ತಾಲೂಕಿನಲ್ಲಿ ಬಸ್‌ಗಳ ಕೊರತೆಯ ಸಮಸ್ಯೆ ಕೇಳಿ ಬರುತ್ತಿದ್ದು, ಬಿಇಓ, ಶಾಲೆಯ ಮುಖ್ಯ ಶಿಕ್ಷಕರು, ಪಿಡಿಒ, ವಾ.ಕ.ರ.ಸ.ಸಾ ಸಂಸ್ಥೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಸಂಚಾರ ಮಾಡುವಂತೆ ವ್ಯವಸ್ಥೆ ಮಾಡಿ, ಬಸ್‌ಗಳ ಕೊರತೆ ಇದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ವಾಕರಸಾ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಮುಸ್ಲಿಂ ಮೀನುಗಾರರೊಬ್ಬರು ಮಾತನಾಡಿ, ಹಲವು ವರ್ಷಗಳಿಂದ 100 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬದವರು ಮೀನುಗಾರಿಕೆ ಮಾಡುಕೊಂಡು ಬರುತ್ತಿದ್ದು, ನಮಗೆ ಸರ್ಕಾರದಿಂದ ದೊರೆಯುವ ಯಾವುದೇ ಸೌಲಭ್ಯವಾಗಲಿ ದೊರೆಯುತ್ತಿಲ್ಲ ಹಾಗೂ ಸಹಕಾರ ಸಂಘಗಳಲ್ಲಿ, ಸೊಸೈಟಿಯಲ್ಲಿ ಹೆಸರನ್ನು ನೋಂದಣಿ ಮಾಡಿಕೊಳುತ್ತಿಲ್ಲ ಎಂದರು. ಈ ಕುರಿತಂತೆ ಪ್ರತಿಕ್ರಿಯಿಸಿದ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರತೀಕ್ ಶೆಟ್ಟಿ, ಈಗಾಗಲೇ ಹೊಸದಾಗಿ ಸೊಸೈಟಿ ಸ್ಥಾಪಿಸಲು ಅರ್ಜಿ ಬಂದಿದ್ದು, ಕೂಡಲೇ ಅವರನ್ನು ಸೊಸೈಟಿಯಲ್ಲಿ ನೋಂದಣಿ ಮಾಡಿಕೊಳ್ಳಲಾಗುವುದು, ಸರ್ಕಾರದಿಂದ ಮೀನುಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದು, ವ್ಯಾಪಾರ ಮಾಡಲು ಸಬ್ಸಿಡಿ ವಾಹನಗಳು, ಮೀನು ಕೃಷಿಗೆ ಸಾಲ, ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ. ಮೀನುಗಾರಿಕೆ ತೆರಳಿ ಮೃತ ಪಟ್ಟರೆ ಸಂಕಷ್ಟ ಪರಿಹಾರ ಮೊತ್ತ ರೂ. 10 ಲಕ್ಷ ನೀಡಲಾಗುತ್ತದೆ ಹಾಗೂ ಅಂಗವಿಕಲತೆ ಹೊಂದಿದವರಿಗೆ 4 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದರು.

ಬೀದಿ ದೀಪ ಅಳಡಿಸುವ ಬಗ್ಗೆ, ರಸ್ತೆ, ಚರಂಡಿ ದುರಸ್ತಿ, ಸ್ಮಶಾನ ಅಭಿವೃದ್ಧಿ, ಖಾಯಂ ವೈದ್ಯರ ನೇಮಕಾತಿ, ಪಿಡಿಓ ನೇಮಕಾತಿ, ಕೆರೆ ಅಭಿವೃದ್ಧಿ, ಅಪಘಾತಕ್ಕೆ ಕಾರಣವಾಗುವ ಮರಗಳ ತೆರವು, ಬಸ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿ ಕಟ್ಟಡ ನಿರ್ಮಾಣ, ಮೀನು ಮಾರುಕಟ್ಟೆ ಅಭಿವೃದ್ಧಿ ಇತರೆ ಸಮಸ್ಯೆಗಳ ಕುರಿತು ದೂರುಗಳನ್ನು ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏನಗಗೌಡರ, ತಹಶೀಲ್ದಾರ್ ನಿಶ್ಚಲ್ ನರೋನಾ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯ್ಕ, ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಮತ್ತಿತರರು ಭಾಗವಹಿಸಿದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *