ಕುಂದಾಪುರ: ತಾಲ್ಲೂಕಿನ ಮರವಂತೆ ಸಮುದ್ರ ಕಿನಾರೆ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಬಸ್ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಹಾಗೂ ಚಾಲಕ ಸಾವನ್ನಪ್ಪಿದ್ದಾರೆ.
ತ್ರಾಸಿಯ ಮರವಂತೆ ಬೀಚ್ ಬಳಿ ಸಂಭವಿಸಿದ ಘಟನೆಯಲ್ಲಿ 35 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳು ಎರಡು ದಿನಗಳ ಹಿಂದೆ ಪ್ರವಾಸಕ್ಕೆ ಹೊರಟಿದ್ದು, ಬಸ್ ನಲ್ಲಿ 24 ವಿದ್ಯಾರ್ಥಿ, 23 ಮಂದಿ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ಮಂದಿ ಇದ್ದರು.
ಕಾಲೇಜಿನಿಂದ ಮುರ್ಡೇಶ್ವರಕ್ಕೆ ತೆರಳಿದ್ದು, ಅಲ್ಲಿಂದ ಬೆಳಗ್ಗೆ ಉಡುಪಿ ಕಡೆ ಬಸ್ ನಲ್ಲಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ , ರಸ್ತೆ ಬದಿ ನಿಲ್ಲಿಸಿದ ಗ್ಯಾಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆಯಿತು. ಬಳಿಕ ಅಲ್ಲೇ ಮುಂದೆ ನಿಲ್ಲಿಸಿದ ಗೂಡ್ಸ್ ಲಾರಿಗೂ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬಸ್ ನ ಮುಂದಿನ ಭಾಗ ನುಜ್ಜುಗುಜ್ಜಾಗಿದ್ದು, ಬಸ್ ಚಾಲಕ ಹಾಗೂ ಕ್ಲೀನರ್ ಮತ್ತು ಅಡುಗೆ ಸಹಾಯಕ ರೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 35ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡು ಕುಂದಾಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್, ಡಿವೈಎಸ್ಪಿ ಎಚ್ ಡಿ. ಕುಲಕರ್ಣಿ, ಪಿಎಸ್ಐ ಪವನ್ ನಾಯ್ಕ್ ಭೇಟಿ ನೀಡಿದ್ದರು.





