ಮಂಗಳೂರು: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ ಹಾಗೂ ಯು. ಟಿ . ಫರೀದ್ ಚಾರಿಟಬಲ್ ಫೌಂಡೇಷನ್ ಟ್ರಸ್ಟ್ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಮೂರು ದಿನಗಳ ಬೃಹತ್ ಕೃಷಿ ಮೇಳ ಹಾಗೂ ಮುಡಿಪು ಉತ್ಸವಕ್ಕೆ ಸ್ಪೀಕರ್ ಯು. ಟಿ. ಖಾದರ್ ಅವರು ಚಾಲನೆ ನೀಡಿದರು.
ಅವರು ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಹಿರಿಯರಾದ ಡಾ. ಮದನ್ ಮೋಹನ್ ನಾಯ್ಕ್ ಅವರು ಮುಡಿಪುವಿನಲ್ಲಿ ಕೃಷ್ಣ ದ್ಯಾನ ಕೇಂದ್ರ ನಿರ್ಮಿಸುವ ಮೂಲಕ ಈ ಪರಿಸರವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾತ್ರವಲ್ಲ ಸೌಹಾರ್ದತೆ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆವ ಇಂತಹ ಉತ್ಸವಗಳು ಈ ನಾಡಿನ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಬಿಂಬಿಸುತ್ತವೆ. ಮುಂದಿನ ದಿನ ಗಳಲ್ಲಿ ಮುಡಿಪುವಿನ ಈ ಕ್ಷೇತ್ರವು ಬೃಹತ್ ಪ್ರವಾಸೋದ್ಯಮ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದರು.
ಸಮಾನತೆ, ಸೌಹಾರ್ದತೆಯ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕಿದೆ. ಇದಕ್ಕಾಗಿ ನಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರವನ್ನು ಒದಗಿಸುವ ಜವಬ್ಧಾರಿ ಪಾಲಕರದ್ದು. ನಮ್ಮ ನಾಡಿನ ಕೃಷಿ, ಸಂಸ್ಕೃತಿ , ತುಳುನಾಡಿನ ಇತಿಹಾಸವನ್ನು ಪರಿಚಯಿಸುವ ಕಾರ್ಯ ಈ ಉತ್ಸವದ ಮೂಲಕ ನೆರವೇರಲಿದೆ ಎಂದರು.
ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಮಾತನಾಡಿ, ಮುಡಿಪು ಪ್ರದೇಶ ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಡಾ. ಮದನ್ ಮೋಹನ್ ನಾಯ್ಕ್ ಅವರು ಸ್ವಂತವಾಗಿ ಕೃಷ್ಣ ದ್ಯಾನ ಕೇಂದ್ರ ನಿರ್ಮಿಸಿ ಇಡೀ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಇಲ್ಲಿ ಮೂರು ದಿನಗಳ ಕಾಲ ನಡೆವ ಮುಡಿಪು ಉತ್ಸವ ಯಶಸ್ವಿ ಆಗಿ ನಡೆಯಲಿ ಎಂದರು.
ಕೃಷ್ಣ ಧ್ಯಾನ ಮಂದಿರದ ಸ್ಥಾಪಕ ಡಾ. ಮದನ್ ಮೋಹನ್ ನಾಯಕ್ ಅಡೇಕಳ ಅವರಿಗೆ ‘ಸೇವಾ ಧುರಂಧರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಕುಮಾರ್ ಆಳ್ವ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪ್ರಶಾಂತ್ ಕಾಜವ, ಕೃಷಿ ಇಲಾಖೆ ವಿಜಯ ಕುಮಾರ್ ರೈ, ಗೌರವ ಸಲಹೆಗಾರ ರಮೇಶ್ ಶೇಣವ, ಲಯನ್ಸ್ ಗೌವರ್ನರ್ ಅರವಿಂದ್ ಶೆಣೈ, ಗಣೇಶ್ ನಾಯ್ಕ್, ಭರತ್ ನಾಯ್ಕ್ ನಚ್ಚಗುತ್ತು, ಅಬ್ದುಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ನಾಸೀರ್ ಎನ್ ಎಸ್, ಮುಖಂಡರಾದ ರಮೇಶ್ ಬೋಳಿಯರ್, ನವಾಜ್ ನರಿಂಗಾನ, ಚಂದ್ರಹಾಸ್ ಕರ್ಕೇರ, ಮುಡಿಪು ಕಾಲೇಜು ಪ್ರಾಂಶುಪಾಲ ಡಾ. ಸತೀಶ್ ಗಟ್ಟಿ, ಪ್ರಾಧ್ಯಾಪಕ ಡಾ.ಶೇಷಪ್ಪ ಅಮೀನ್, ಮುಖಂಡರಾದ ರಾಧಾಕೃಷ್ಣ ಉಮಿಯ, ಕೃಷಿ ಇಲಾಖೆ ವೀಣಾ , ಶಿಕ್ಷಣಾಧಿಕಾರಿ ಈಶ್ವರ್, ಅರುಣ್ ಡಿಸೋಜ, ಜನಶಿಕ್ಷಣ ಟ್ರಸ್ಟ್ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಟಿ.ಆರ್. ಖಾದರ್, ನಾಸೀರ್ ಕೆ.ಕೆ.ಎಸ್, ಸೂಫಿಕುಂಞಿ, ಹೈದರ್ ಕೈರಂಗಳ, ತ್ಯಾಗಂ ಹರೇಕಳ, ಅಬ್ದುಲ್ ರಝಾಕ್ ಕುಕ್ಕಾಜೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಇದ್ದರು.





