11 ನೇ ವರ್ಷದ ಪಟ್ಲ ಸಂಭ್ರಮ, ಡಾ. ಮೋಹನ್ ಆಳ್ವಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ: ಡಾ. ಸದಾಶಿವ ಶೆಟ್ಟಿ ಕನ್ಯಾನ

2402

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ 11ನೇ ವರ್ಷದ ಪಟ್ಲ ಸಂಭ್ರಮ 2026 ಕಾರ್ಯಕ್ರಮ ಮೇ 30 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 8.30 ರಿಂದ ಚೌಕಿ ಪೂಜೆ ಮತ್ತು ಅಬ್ಬರ ತಾಳದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಭರತನಾಟ್ಯ ಪ್ರದರ್ಶನ, ಸಭಾ ಕಾರ್ಯಕ್ರಮ, ಯೋಗ ಪ್ರದರ್ಶನ, ಮಹಿಳಾ ಯಕ್ಷಗಾನ ಹಾಗೂ ಯಕ್ಷಗಾನ ಹಾಸ್ಯ ವೈಭವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೌರವ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತನಾಡಿ, 2026 ನೇ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಡಾ. ಎಂ. ಮೋಹನ್ ಆಳ್ವ ಅವರಿಗೆ ನೀಡಿ ಗೌರವಿಸಲಾಗುವುದು. ಪಟ್ಲ ಪ್ರಶಸ್ತಿಯನ್ನು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ನಡೆವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಗಳು ಹಾಗೂ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಂಬೈ ಹೇರಂಭ ಇಂಡಸ್ಟ್ರೀಸ್ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಆರ್‌ಜಿ ಗ್ರೂಪ್, ಬೆಂಗಳೂರು ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 11 ವರ್ಷಗಳಲ್ಲಿ 16 ಕೋಟಿ ರೂಪಾಯಿ ಮೌಲ್ಯದ ಸೇವಾ ಕಾರ್ಯಗಳನ್ನು ನೆರವೇರಿಸಿದೆ. ಟ್ರಸ್ಟ್ ವತಿಯಿಂದ ಪಟ್ಲ ಪ್ರಶಸ್ತಿ, ಯಕ್ಷಾಶ್ರಯ ಮನೆ ನಿರ್ಮಾಣ, ಗೃಹ ದುರಸ್ತಿ ನೆರವು, ಗೌರವಧನ, ಅಪಘಾತ ವಿಮಾ ಯೋಜನೆ ಸೇರಿದಂತೆ ಹಲವು ಕಲಾವಿದರ ಕಲ್ಯಾಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದರು.

ಅಮೆರಿಕಾದ ಅರಿಜೋನಾ ಹಾಗೂ ಮಿಲ್ವಾಕಿ ನಗರಗಳಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ದಿನವನ್ನು ಘೋಷಣೆ ಮೂಲಕ ಫೌಂಡೇಶನ್‌ಗೆ ಅಂತರ ರಾಷ್ಟ್ರೀಯ ಮಾನ್ಯತೆ ದೊರೆತಿದೆ. ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆ ಅಡಿ 51 ಶಿಕ್ಷಕರ ಮೂಲಕ 89 ಶಾಲೆಗಳ 13,248 ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ 5,234 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದ್ದಾರೆ ಎಂದರು.

ಸಿಎ ಉದಯ ಕುಮಾರ್ ಶೆಟ್ಟಿ, ಆರತಿ ರಾಮಚಂದ್ರ ಆಳ್ವ, ಸೀತಾರಾಮ್ ರೈ ಸವಣೂರು, ಪ್ರಭಾಕರ ಜೋಷಿ, ಭುಜಬಲಿ ಧರ್ಮಸ್ಥಳ, ಪ್ರದೀಪ್ ಆಳ್ವ ಕದ್ರಿ, ಬಾಳಾ ಜಗನ್ನಾಥ ಶೆಟ್ಟಿ ಮತ್ತಿತರರು ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma