ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ದಾಖಲಾಗಲು ಏ. 17 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, 2026ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಣಿ ಮಾಡಿಕೊಂಡು, ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2 ಕ್ಕೆ ನೋಂದಣಿ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕ http://tinyurl.com/mvp9k6es ಲಿಂಕ್ ಬಳಸಿ ಅಥವಾ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಅನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು. ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು 2026 ರಲ್ಲಿ ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ಹಾಗೂ ಕಾರಣಾಂತರಗಳಿಂದ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳನ್ನು ತಮ್ಮ ಲಾಗಿನ್ ಮುಖಾಂತರ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ನೋಂದಣಿ ಮಾಡಿಕೊಂಡ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ನಿಗದಿತ ಸಮಯದಲ್ಲಿ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಲಾಗಿನ್ ನಲ್ಲಿ ಲಭ್ಯಗೊಳಿಸಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-2ಯ ವೇಳಾಪಟ್ಟಿ ಪ್ರಕಟ ಆಗಿದ್ದು, ಏ. 30 ರಂದು ಕನ್ನಡ ಮತ್ತು ಅರೇಬಿಕ್ ಭಾಷೆ, ಮೇ 1 ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ ಮತ್ತು ರಸಾಯನಶಾಸ್ತ್ರ, ಮೇ 4 ರಂದು ಇಂಗ್ಲಿಷ್, ಮೇ 5 ರಂದು ವ್ಯವಹಾರ ಅಧ್ಯಯನ, ಭೌತಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರ, ಮೇ 6 ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ, ಮೇ 7 ರಂದು ಇತಿಹಾಸ, ಗಣಿತ ಮತ್ತು ಗೃಹ ವಿಜ್ಞಾನ, ಮೇ 8ರಂದು ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ (ಎಲೆಕ್ಟ್ರಾನಿಕ್ಸ್) ಮತ್ತು ಗಣಕ ವಿಜ್ಞಾನ, ಮೇ 9 ರಂದು ಹಿಂದಿ, ಮೇ 11 ರಂದು ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ, ಮೇ 12 ರಂದು ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ ಮತ್ತು ಮೂಲ ಗಣಿತ ಪರೀಕ್ಷೆಗಳು ನಡೆಯಲಿವೆ.
ಮೇ 13 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರಿಗೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆ ನಡೆಯಲಿವೆ. ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.15 ರವರೆಗೆ ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ ಮುಂತಾದ ವೃತ್ತಿಪರ ವಿಷಯಗಳ ಪರೀಕ್ಷೆಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.





