ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2025-26 ನೇ ಸಾಲಿನ ಹಣಕಾಸು ವರ್ಷದಲ್ಲಿ ರೂಪಾಯಿ 20,226.19 ಕೋಟಿಗಳ ವ್ಯವಹಾರ ಮಾಡಿದ್ದು, ಸಾರ್ವಕಾಲಿಕ ದಾಖಲೆಯ 131.14 ಕೋಟಿಗಳ ನಿವ್ವಳ ಲಾಭ ಗಳಿಸಿದೆ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕ್ ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯವಹಾರದಲ್ಲಿ ಶೇ 16.47 ರಷ್ಟು ಏರಿಕೆ ಕಂಡಿದೆ. ಇದರ ಜತೆಗೆ ರೂ.131.14 ಕೋಟಿಗಳ ಲಾಭ ದಾಖಲಿಸಿದೆ. ಇದು ಕಳೆದ ವರ್ಷದ ಲಾಭಕ್ಕಿಂತ ಶೇ 18.78 ರಷ್ಟು ಏರಿಕೆ ಆಗಿದೆ. ಬ್ಯಾಂಕಿನ ಅನುತ್ಪಾದಕ ಆಸ್ತಿ ಪ್ರಮಾಣವು ಶೇ 2.21ಕ್ಕೆ ಇಳಿಕೆ ಆಗಿದ್ದು, ಬ್ಯಾಂಕಿನ ಆರ್ಥಿಕ ಸುಸ್ಥಿತಿಗೆ ಕಾರಣ ಆಗಿದೆ ಎಂದರು.
ಬ್ಯಾಂಕ್ ಒಟ್ಟು ರೂಪಾಯಿ 9264. 64 ಕೋಟಿಗಳ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ 17.53 ರಷ್ಟು ಪ್ರಗತಿ ಸಾಧಿಸಿದೆ. ಮುಂಗಡ ವಿಭಾಗದಲ್ಲಿ ಒಟ್ಟು ರೂ 9766.75 ಕೋಟಿಗಳ ಸಾಲ ವಿತರಿಸಲಾಗಿದ್ದು, ಇದರಲ್ಲಿ ಕೃಷಿ ಕ್ಷೇತ್ರಕ್ಕೆ ರೂ 2340.08 ಕೋಟಿಗಳ ಸಾಲ ನೀಡಲಾಗಿದೆ. ಕಳೆದ 31 ವರ್ಷಗಳಿಂದ ಕೃಷಿ ಸಾಲ ಮರು ಪಾವತಿಯಲ್ಲಿ ಬ್ಯಾಂಕ್ ಶೇ 100 ರಷ್ಟು ಸಾಧನೆ ಮಾಡುತ್ತಾ ಬಂದಿದ್ದು, ಇದು ರಾಷ್ಟ್ರಮಟ್ಟದ ದಾಖಲೆ ಆಗಿದೆ ಎಂದರು.
ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಬ್ಯಾಂಕ್, ಯುಪಿಐ, ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಮತ್ತು ಟ್ಯಾಬ್ ಬ್ಯಾಂಕಿಂಗ್ ಸೇವೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಈಗಾಗಲೇ 1.44 ಲಕ್ಷಕ್ಕೂ ಅಧಿಕ ರೈತರಿಗೆ ‘ರುಪೇ’ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ‘ಬ್ಯಾಂಕ್ ಆನ್ ವೀಲ್ಸ್’ ಯೋಜನೆ ಮತ್ತು ಮೊಬೈಲ್ ಆಪ್ ಮೂಲಕ ಹಣ ವರ್ಗಾವಣೆ ಸೌಲಭ್ಯಗಳು ಜನಪ್ರಿಯತೆ ಗಳಿಸಿವೆ ಎಂದರು.
ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬೆಳಪು ದೇವಿಪ್ರಸಾದ್ ಶೆಟ್ಟಿ ನಿರ್ದೇಶಕರುಗಳಾದ ಎಂ. ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಶಶಿಕುಮಾರ್ ರೈ ಬಾಲೊಟ್ಟು, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ ಇದ್ದರು.
ಸ್ತ್ರೀ ಶಕ್ತಿ ಸಂಘಗಳ ಸಬಲೀಕರಣದಲ್ಲಿ ರಾಜ್ಯದಲ್ಲೇ ಪ್ರಥಮ
ಕೇಂದ್ರ ಸರ್ಕಾರದ ಅಟಲ್ ಪೆನ್ನನ್ ಯೋಜನೆ ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಕ್ಕಾಗಿ ಬ್ಯಾಂಕ್ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಸ್ತ್ರೀ ಶಕ್ತಿ ಸಂಘಗಳ ಸಬಲೀಕರಣದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಹೊಂದಿದ್ದು, 34,765 ಗುಂಪುಗಳನ್ನು ಹೊಂದಿದೆ. ಬ್ಯಾಂಕಿನ ಸರ್ವಾಂಗೀಣ ಸಾಧನೆಗಾಗಿ 23 ಬಾರಿ ಅಫೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 19 ಬಾರಿ ನಬಾರ್ಡ್ ಪ್ರಶಸ್ತಿಗಳು ಸಂದಿವೆ. ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ. ಪ್ರಸ್ತುತ ಬ್ಯಾಂಕಿನ ಎಲ್ಲಾ ಶಾಖೆಗಳು ಗಣಕೀಕೃತಗೊಂಡಿದ್ದು, ಆರ್.ಟಿ.ಜಿ.ಎಸ್ ಮತ್ತು ನೆಫ್ಟ್ ಸೌಲಭ್ಯಗಳನ್ನು ಹೊಂದಿವೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು 20 ಶಾಖೆಗಳನ್ನು ಸಂಪೂರ್ಣ ಹವಾನಿಯಂತ್ರಿತಗೊಳಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದರು.





